ಬೆಂಗಳೂರು: ಫನ್ ವರ್ಲ್ಡ್ ಮಾಲೀಕನ ಮಗ ವೀಕೆಂಡ್ ಮಸ್ತಿಗಾಗಿ ಲ್ಯಾಂಬೋರ್ಗಿನಿ ಕಾರಿನಲ್ಲಿ ರೇಸ್ ಹೋಗಿ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದನು. ಅಲ್ಲದೆ ಫೋಟೋಗೆ ಪೋಸ್ ಕೊಟ್ಟಿದ್ದು, ಇದೀಗ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಫನ್ ವರ್ಲ್ಡ್ ಮಾಲೀಕನ ಮಗ ಸನ್ನಿ ಸಬರ್ವಾಲ್ ಭಾನುವಾರ ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಬಳಿ ಅಪಘಾತ ಮಾಡಿ ಫೋಟೋಗೆ ಪೋಸ್ ಕೊಟ್ಟು ಎಸ್ಕೇಪ್ ಆಗಿದ್ದನು. ತಾನು ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದು ಜಖಂಗೊಂಡಿರುವ ಚೌಕಿಯ ಮುಂದೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಫೋಟೋ ಶೇರ್ ಮಾಡಿಕೊಂಡಿದ್ದರಿಂದ ಪೊಲೀಸರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
Advertisement
ಅಲ್ಲದೆ ಆರೋಪಿ ಸನ್ನಿಯ ನಡೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿತ್ತು. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಸನ್ನಿ ಸಬರ್ವಾಲ್ನನ್ನ ವಶಕ್ಕೆ ಪಡೆದು ಬೆವರಿಳಿಸಿದ್ದಾರೆ. ಸಂಚಾರಿ ಪೂರ್ವ ವಿಭಾದ ಡಿಸಿಪಿ ಹಾಗೂ ಇಬ್ಬರು ಎಸಿಪಿ ಕಬ್ಬನ್ ಪಾರ್ಕ್ ಸಂಚಾರಿ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ.
Advertisement
ಘಟನೆ ನಡೆದಾಗ ಯಾರೆಲ್ಲ ಕಾರಿನಲ್ಲಿದ್ದೀರಿ, ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದು ಚೌಕಿ ಜಖಂ ಆದ ಬಳಿಕ ಚೌಕಿ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದು ಯಾಕೆ? ಅಪಘಾತವಾದ ಬಳಿಕ ಚೌಕಿ ಮುಂದೆ ತೆಗೆಸಿದ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಂಡಿದ್ಯಾಕೆ ಎಂದು ಹತ್ತು ಹಲವು ಪ್ರಶ್ನೆಗಳನ್ನ ಆರೋಪಿ ಸನ್ನಿ ಸಬರ್ವಾಲ್ಗೆ ಪೊಲೀಸರು ಹಾಕಿದ್ದಾರೆ. ಹೀರೋ ರೀತಿ ರೇಸ್ ಹೋಗಿ ಡಿಕ್ಕಿ ಹೊಡೆದು ಪೋಸ್ ಕೊಟ್ಟಿದ್ದ ಸನ್ನಿ ಪೊಲೀಸರ ಮುಂದೆ ಹಿಂಗು ತಿಂದ ಮಂಗನಂತೆ ಬಾಯಿ ಬಿಡದೇ ಕೂತಿದ್ದ ಎನ್ನಲಾಗಿದೆ.