ಕೊಪ್ಪಳ: ಕೊಳವೆ ಬಾವಿಗೆ ಬಿದ್ದ ಕುರಿ ಮರಿಯನ್ನು ಜನರು ರಕ್ಷಣೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಕುರುಮರಿಯೊಂದು ಬಿದ್ದಿತ್ತು. ವೆಂಕಟೇಶ ಬುಕ್ಕ ಎಂಬವರು ತಮ್ಮ ಹೊಲದಲ್ಲಿ ಎರಡು ತಿಂಗಳ ಹಿಂದೆ ಕೊಳವೆ ಬಾವಿ ಕೊರೆಸಿದ್ರು. ಆದ್ರೆ ನೀರು ಬಾರದ ಹಿನ್ನಲೆಯಲ್ಲಿ ಕೊಳವೆ ಬಾವಿ ಮುಚ್ಚದೆ ಹಾಗೆ ಬಿಟ್ಟಿದ್ದರು. ದುರ್ಗಪ್ಪ ಎಂಬವರು ತಮ್ಮ ಕುರಿಗಳನ್ನು ಮೇಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಕೊಳವೆ ಬಾವಿ ಪಕ್ಕದಲ್ಲೇ ಇದ್ದ ನೀರನ್ನು ಕುಡಿಯಲು ಕುರಿಗಳು ಹೋಗಿದ್ದ ಸಂದರ್ಭದಲ್ಲಿ ಕೊಳವೆ ಬಾವಿಗೆ ಒಂದು ವರ್ಷದ ಕುರಿಮರಿ ಬಿದ್ದಿತ್ತು.
ಬೆಳಗ್ಗೆ 11 ಗಂಟೆಗೆ ಕುರಿಮರಿ ಕೊಳವೆ ಬಾವಿಗೆ ಬಿದ್ದಿದ್ದು, ಸ್ಥಳೀಯರು ಕೂಡಲೇ ಪೊಲೀಸರಿಗೆ ಮತ್ತು ಹೊಲದ ಮಾಲೀಕರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಕಾರಟಗಿ ಪೊಲೀಸರು ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ ಗ್ರಾಮಸ್ಥರು ಕಬ್ಬಿಣದ ಕೊಂಡಿ ಹಾಕಿ ಹಗ್ಗದ ಸಹಾಯದಿಂದ ಕುರಿಮರಿಯನ್ನು ಕೊಳವೆ ಬಾವಿಯಿಂದ ಮೇಲೆತ್ತಿದ್ದಾರೆ.
ಸತತ ಐದು ಗಂಟೆಗಳ ಕಾಲ ಗ್ರಾಮಸ್ಥರು ಪರಿಶ್ರಮಪಟ್ಟು ಕುರಿಮರಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕುರಿಮರಿಯನ್ನು ಎತ್ತಲು ಕಬ್ಬಿಣದ ಕೊಂಡಿಗಳನ್ನು ಹಾಕಿದ್ದರಿಂದ ಗಾಯಗೊಂಡಿದೆ.