ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ – ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನಿಂದ ಕೃತ್ಯ ಆರೋಪ

Public TV
2 Min Read
Belagavi Pruthvi Singh

ಬೆಳಗಾವಿ: ಒಂದು ಕಡೆ ಬೆಳಗಾವಿಯಲ್ಲಿ (Belagavi) ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ, ಮತ್ತೊಂದು ಕಡೆ ನೆತ್ತರು ಹರಿದೆ. ಬಿಜೆಪಿ (BJP) ರಾಜ್ಯಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ (Pruthvi Singh) ಮೇಲೆ ಚಾಕು ಇರಿತವಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಪರಮಾಪ್ತರಾಗಿರುವ ಪೃಥ್ವಿ ಸಿಂಗ್ ಮೇಲೆ, ಎಂಎಲ್‌ಸಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಹೋದರ ಚನ್ನರಾಜ್ (Channaraj) ಹಟ್ಟಿಹೊಳ್ಳಿ ಆಪ್ತರು ಈ ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಸದ್ದಾಂ, ಸುಜಯ್ ಜಾಧವ್ ಮತ್ತು ಚನ್ನರಾಜ್ ಅವರು ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬಂದಿದೆ. ಸಂಜೆ ಪೃಥ್ವಿ ಸಿಂಗ್ ಮನೆಗೆ ಏಕಾಏಕಿ ಬಂದ ಆರೋಪಿಗಳು ಕೆಲಹೊತ್ತು ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ನೇರವಾಗಿ ಚಾಕುವಿನಿಂದ ಹಲ್ಲೆಗೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಸದ್ಯ ಪೃಥ್ವಿ ಸಿಂಗ್‌ಗೆ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ಸಿಪಿವೈ ಬಾವ ನಾಪತ್ತೆ ಪ್ರಕರಣ ದುರಂತ ಅಂತ್ಯ – ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ, ಅಂತ್ಯಕ್ರಿಯೆಗೆ ಸಿದ್ಧತೆ

ಸುದ್ದಿ ತಿಳಿದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ ಸಿಎಂ, ಡಿಸಿಎಂ ಗೃಹ ಸಚಿವರು ಬೆಳಗಾವಿಯಲ್ಲಿ ಇರುವಾಗಲೇ ಈ ರೀತಿ ಘಟನೆ ನಡೆದಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೆವೆ. ಘಟನೆ ನಡೆಯುವಾಗ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಹಾಗೂ ಎಂಎಲ್‌ಸಿ ಚನ್ನರಾಜ್ ಸ್ಥಳದಲ್ಲಿ ಇರುವ ಮಾಹಿತಿಯಿದೆ. ಇಂದು ರಾತ್ರಿಯೇ ಆರೋಪಿಗಳ ಬಂಧನವಾಗಬೇಕು ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮದುವೆಗೆ ಹೋಗಿ ಬರುತ್ತಿದ್ದವರ ಕಾರು ಅಪಘಾತ – ಇಬ್ಬರು ಸಾವು, ಐವರು ಗಂಭೀರ

ಘಟನೆ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಸಹೋದರನ ಜೊತೆಗೆ ಮಾತನಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಇದರ ಹಿಂದೆ ಯಾರು ಇದ್ದಾರೆ? ಇದು ಷಡ್ಯಂತ್ರವೋ, ರಾಜಕೀಯ ಪ್ರೇರಿತವೋ ಎಂದು ಗೊತ್ತಾಗಬೇಕು. ಈ ಬಗ್ಗೆ ಪೃಥ್ವಿ ಸಿಂಗ್ ದೂರು ನೀಡಲಿ. ಪೊಲೀಸರು ಆರೋಪಿಗಳನ್ನು ಬಂಧನ ಮಾಡುತ್ತಾರೆ ಎಂದರು. ಇನ್ನೊಂದೆಡೆ ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಏನೇ ಇದ್ದರೂ ನಮ್ಮ ಪೊಲೀಸರು ನೋಡಿಕೊಳ್ಳುತ್ತಾರೆ. ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಟೆಕೆಟ್‌ಗಾಗಿ ಕೋಟಿ ಡೀಲ್‌ – ಚೈತ್ರಾಗೆ ಜಾಮೀನು ಮಂಜೂರು

ಒಟ್ಟಿನಲ್ಲಿ ಅಧಿವೇಶನ ನಡೆಯುವಾಗಲೇ ಇಂತಹ ಪ್ರಕರಣ ನಡೆದಿದ್ದು, ಆಡಳಿತ ಸರ್ಕಾರಕ್ಕೆ ಮುಜುಗರ ತಂದಿದೆ. ಮತ್ತೊಂದು ಕಡೆ ಬಿಜೆಪಿ ಇದರ ವಿರುದ್ಧ ಯಾವೆಲ್ಲ ರೀತಿ ಹೋರಾಟ ಮಾಡಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿದ ಅರ್ಜುನ – ನಡೆದಿದ್ದೇನು?

Share This Article