ಬೆಳಗಾವಿ: ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಇದೀಗ ಮತ್ತೊಂದು ವಿವಾದದಿಂದ ಸುದ್ದಿಯಾಗಿದ್ದಾರೆ. ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಅಧ್ಯಕ್ಷ ವಿಜಯ್ ತಳವಾರಗೆ ಧಮ್ಕಿ ಹಾಕಿದ್ದಾರೆ.
ವಾಲ್ಮೀಕಿ ಸಮುದಾಯದ ಮುಖಂಡ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೋಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿಗಳ ಬಳಗದ ಫೇಸ್‍ಬುಕ್ ಗ್ರೂಪ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ವಿಜಯ್ ತಳವಾರ್, ಮಾತಿನ ಮೇಲೆ ನಿಗಾ ಇರಲಿ, ಇಲ್ಲದಿದ್ದರೆ ಪರಿಣಾಮ ಸರಿ ಇರಲ್ಲ. ಈ ರೀತಿ ಪೋಸ್ಟ್ ಮಾಡಿದವರು ಯಾರು ತಿಳಿಸಿ, ಇಲ್ಲದಿದ್ದರೆ ನಾವು ಹುಡುಕುತ್ತೇವೆ ಅಂತ ಎಚ್ಚರಿಸಿ ಮತ್ತೊಂದು ಪೋಸ್ಟ್ ಮಾಡಿದ್ರು.
ಇದರಿಂದ ಕೆರಳಿ ಕೆಂಡಾ ಮಂಡಲವಾದ ಲಕ್ಷ್ಮೀ ಹೆಬ್ಬಾಳ್ಕರ್, ಕಳೆದ ಆಗಸ್ಟ್ 29ರಂದು ರಾತ್ರಿ 9.30ಗಂಟೆಗೆ ವಿಜಯ್‍ಗೆ ಫೋನ್ ಮಾಡಿ ನಮ್ಮ ಹುಡುಗರ ತಂಟೆಗೆ ಬಂದ್ರೆ ನೀನು ಇರೋದಿಲ್ಲ, ಹುಷಾರಾಗಿರು ಅಂತ ಧಮ್ಕಿ ಹಾಕಿದ್ದಾರೆ. ಈ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದ್ದು, ಸದ್ಯ ವಿಜಯ್ ಈ ಆಡಿಯೋ ಮುಂದಿಟ್ಟುಕೊಂಡು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೇ ನನ್ನ ಜೀವಕ್ಕೆ ಏನಾದ್ರೂ ತೊಂದರೆಯಾದ್ರೆ, ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಅಂತ ಹೇಳಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಇಲ್ಲಿನ ಬಸರೀಕಟ್ಟಿ ಗ್ರಾಮದಲ್ಲಿ ಮಾಡಿದ ಭಾಷಣದಲ್ಲಿ, ನಾನು ಈ ಗ ಕರ್ನಾಟಕದಲ್ಲಿದ್ದೇನೆ. ಆದರೆ ಗಡಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಪ್ರಕರಣದ ಮುಗಿದು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಿಗಿಂತ ಮೊದಲು ನಾನು ಜೈ ಮಹಾರಾಷ್ಟ್ರವೆಂದು ಹೇಳುವೆ. ಯಾವನಿಗೂ ಈ ರೀತಿ ಹೇಳಲು ಧೈರ್ಯ ಇಲ್ಲ. ಆದ್ರೆ ನನಗೆ ಯಾರ ಭಯವೂ ಇಲ್ಲ. ನಾನು ಯಾರಿಗೂ ಹೆದರುವುದಿಲ್ಲ. ನಾನು ಹೆದರುವುದು ಆ ಭಗವಂತನಿಗೆ ಮತ್ತು ನನ್ನ ತಂದೆ-ತಾಯಿಗೆ ಅಂತ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದರು.
ಅವರು ಮಾಡಿದ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.