ಬೆಳಗಾವಿ: ಉಪಚುನಾವಣೆ ಕಾವು ಜೋರಾಗಿದ್ದು, ಗೋಕಾಕ್ ಅಖಾಡಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಯಾಕೆ ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೋ ಕಮೆಂಟ್ಸ್ ಎಂದು ಜಾರಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕಿ ಏನೇ ಪ್ರಶ್ನೆ ಕೇಳಿದರೂ ನಾನು ಈ ಬಗ್ಗೆ ಈಗ ಪ್ರತಿಕ್ರಿಯಿಸಲ್ಲ, ಮುಂದೆ ಮಾತನಾಡಬಹುದು, ಈಗ ಚುನಾವಣೆ ಸಮಯ ಹೀಗಾಗಿ ನಾನು ಮಾತನಾಡಲು ಇಷ್ಟಪಡಲ್ಲ ಎಂದು ಜಾಣತನದ ಉತ್ತರ ಕೊಟ್ಟಿದ್ದಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಶಿಸ್ತಿನ ಸಿಪಾಯಿಗಳ ರೀತಿ ಪಕ್ಷದ ಮಾತನ್ನು ಕೇಳಬೇಕು ಎಂದಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ಪಣತೊಟ್ಟಿ ನಿಂತಿದ್ದ ನೀವು ಗೋಕಾಕ್ ಬಿಟ್ಟು ಅಥಣಿಯಲ್ಲಿ ಯಾಕೆ ಪ್ರಚಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಕ್ಕೆ, ನನಗೆ ಪಕ್ಷ ಇಲ್ಲಿ ಪ್ರಚಾರ ನಡೆಸಲು ಜವಾಬ್ದಾರಿ ನೀಡಿದೆ. ಹೀಗಾಗಿ ಅಥಣಿಗೆ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ. ಆದ್ರೆ ಯಾಕೆ ಡಿಕೆಶಿ ಅವರು ಇನ್ನೂ ಗೋಕಾಕ್ ಕಣಕ್ಕೆ ಬಂದಿಲ್ಲ ಎಂದು ಕೇಳಿದಾಗ, ಈ ಬಗ್ಗೆ ನೀವು ಡಿಕೆಶಿ ಅವರನ್ನೇ ಕೇಳಿದರೆ ಉತ್ತಮ. ನಾನು ಅವರ ಪಿಆರ್‍ಓ ಅಲ್ಲ ಎಂದು ಹೇಳಿದ್ದಾರೆ. ಜೊತೆಗೆ ಜಾರಕಿಹೊಳಿ ಬ್ರದರ್ಸ್ ಹೊಂದಾಣಿಕೆ ಪಾಲಿಟಿಕ್ಸ್ ಬಗ್ಗೆ ಮಾತನಾಡಿ, ಸದ್ಯಕ್ಕೆ ನೋ ಕಮೆಂಟ್ಸ್. ಮುಂದೆ ನಾನು ಈ ಬಗ್ಗೆ ಮಾತನಾಡಬಹುದು. ಆದ್ರೆ ಚುನಾವಣೆ ಸಮಯವಾಗಿರುವುದರಿಂದ ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡಲ್ಲ ಎಂದು ಹೇಳಿದರು.
ಗೋಕಾಕ್ ಬಗ್ಗೆ ಹೆಚ್ಚು ಆಸಕ್ತಿ ಇತ್ತಾ ಎಂದು ಕೇಳಿದಾಗಲೂ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ ಎಂದು ಕಾಲಾಯ ತಸ್ಮೈ ನಮಃ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ಎಷ್ಟು ಲೀಡ್‍ನಲ್ಲಿ, ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ನಾನು ಭವಿಷ್ಯ ಹೇಳಲ್ಲ. ನಾನು ಭವಿಷ್ಯಗಾರ್ತಿ ಅಲ್ಲ ಎನ್ನುವ ಮೂಲಕ ಚುನಾವಣೆ ಇರುವುದಕ್ಕೆ ಸದ್ಯ ನಾನು ಮೌನವಾಗಿರುತ್ತೇನೆ ಯಾವುದಕ್ಕೂ ಪ್ರತಿಕ್ರಿಯಿಸಲ್ಲ ಎನ್ನುವ ಹಾಗೆ ಲಕ್ಷ್ಮೀ ಅವರು ಎಲ್ಲದಕ್ಕೂ ನೋ ಕಮೆಂಟ್ಸ್ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ.