ಬೆಳಗಾವಿ: ಅನರ್ಹ ಶಾಸಕ, ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನನ್ನ ಬಗ್ಗೆ ತುಂಬಾನೇ ಮಾತಾಡಿದ್ದಾರಂತೆ. ಅದಕ್ಕೆಲ್ಲಾ ಉತ್ತರ ಕೊಡಬೇಕಿದೆ. ಯಾರ ಸಾಲವನ್ನು ಹೊತ್ತುಕೊಂಡು ಹೋಗುವಳು ನಾನಲ್ಲ. ಸಾಲ ತೀರಿಸುತ್ತೇನೆ ಎಂದು ಕುಮಟಳ್ಳಿಯವರ ವಿರುದ್ಧ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಕುಮಟಳ್ಳಿಯವರ ಆರೋಪಗಳಿಗೆ ನಾಳೆ ಊರಿನ ಜನರನ್ನು ಸೇರಿಸಿಯೇ ಉತ್ತರ ಕೊಡಬೇಕು. ಏಕೆಂದರೆ ಮಹೇಶ್ ಕುಮಟಳ್ಳಿ ಅವರು ತುಂಬಾ ಮಾತನಾಡಿದ್ದಾರೆ. ಇದಕ್ಕೆ ಉತ್ತರ ಕೊಡಬೇಕಿದೆ. ನನಗೆ ಯಾರ ಸಾಲ ಇಟ್ಟುಕೊಂಡು ರೂಢಿ ಇಲ್ಲ. ಎಲ್ಲ ಸಾಲ ಚುಕ್ತಾ ಮಾಡುತ್ತೇನೆ. ಸಾಲ ಹೊತ್ತುಕೊಂಡು ಹೋಗುವವಳು ನಾನಲ್ಲ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ನೆರೆ ಸಂಭವಿಸಿದ ಸಂದರ್ಭದಲ್ಲಿ ನಿನ್ನ ಹಾಗೆ ನಾನು ಓಡಿ ಹೋಗಲಿಲ್ಲ, ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ. ಕಾಂಗ್ರೆಸ್ ಬಿಟ್ಟು ಹೋಗಿದ್ದರೂ ಪರವಾಗಿರಲಿಲ್ಲ. ಜನರ ಕಷ್ಟಗಳೊಂದಿಗೆ ನಿಂತಿದ್ದರೆ ಭಲೇ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆ. ಕಷ್ಟಕ್ಕೆ ಸ್ಪಂದಿಸಿದ್ದರೆ, ನಿನ್ನ ಸ್ವಾರ್ಥಕ್ಕಾಗಿ ಬಿಟ್ಟು ಹೋದರೂ ಸಹ ಜನ ಏನೂ ಅನ್ನುತ್ತಿರಲಿಲ್ಲ. ಆದರೆ ಜನರ ಕಷ್ಟಗಳಿಗೆ ಸ್ಪಂದಿಸದೆ ಮುಂಬೈ ಹೋಟೆಲ್‍ನಲ್ಲಿ ನೀನು ಕುಳಿತುಕೊಂಡೆ. ದುಡ್ಡು ಬೇಕಾಗಿತ್ತು ಅದಕ್ಕೆ ಹೋದೆ, ಸುಮ್ಮನೆ ಯಾಕೆ ದ್ರೋಹ ಆಗಿತ್ತು ಎಂದು ಹೇಳುವುದು. ಎರಡು ಬಾರಿ ಟಿಕೆಟ್ ನೀಡಲಾಗಿದೆ ಹೀಗಿರುವಾಗ ದ್ರೋಹ ಹೇಗಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಚುನಾವಣೆ ಬಂದಾಗ ಹೇಗೆ ಮನೆ ಮನೆಗೆ ಓಡಾಡಿ ಮತಯಾಚನೆ ಮಾಡುತ್ತೇವೋ ಹಾಗೆಯೇ ಪ್ರವಾಹದ ವೇಳೆ ಎಲ್ಲ ಮನೆಗಳಿಗೆ ತೆರಳಿ ನಾನು, ನನ್ನ ಮಗ, ತಮ್ಮ, ತಾಯಿ, ಅಕ್ಕ ತಂಗಿಯರು ಸೇರಿ ಪ್ರತಿಯೊಬ್ಬರೂ ಓಡಾಡಿ 43 ದಿನ ಟೊಂಕ ಕಟ್ಟಿ ಕೆಲಸ ಮಾಡಿದ್ದೇವೆ. ಹೆಣ್ಣು ಮಕ್ಕಳಿಗೆ ತುತ್ತು ಮಾಡಿ ಊಟ ಮಾಡಿಸಿದ್ದೇವೆ. ನಮ್ಮ ಲಕ್ಷ್ಮಿ ತಾಯಿ ಫೌಂಡೇಶನ್ ಮೂಲಕ ಸುಮಾರು 50 ಲಕ್ಷ ರೂ.ಗಳ ಆಹಾರ ಸಾಮಗ್ರಿಗಳನ್ನು ನೀಡಿದ್ದೇನೆ. ಬ್ಲಾಂಕೆಟ್, ಚಾಪೆ ಸೇರಿದಂತೆ ವಿವಿಧ ವಸ್ತುಗಳನ್ನು ಕೊಟ್ಟಿದ್ದೇವೆ. ಇಷ್ಟಾದರೂ ನಾವು ಎಲ್ಲೂ ಹೇಳಿಕೊಂಡಿಲ್ಲ. ಕಷ್ಟದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಗೆ ಸ್ಪಂದಿಸಿದ್ದಾರೆ ಎಂದು ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ವಿವರಿಸಿದರು.