ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಲಕ್ಷ್ಮೀಬಾರಮ್ಮ’ ಧಾರಾವಾಹಿಯನ್ನು ಹಲವಾರು ವರ್ಷಗಳಿಂದ ನೋಡುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ಚಿನ್ನು ಕ್ಯಾರೆಕ್ಟರ್ ನಿಭಾಯಿಸ್ತಿರುವ ರಶ್ಮಿ ಪ್ರಭಾಕರ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದರೆ ಅವರ ಜೀವನದಲ್ಲಿ ಒಂದು ದುರಂತ ಕಥೆ ನಡೆದಿದೆ.
ಲಕ್ಷ್ಮೀಬಾರಮ್ಮ ಸೀರಿಯಲ್ ನೋಡುವಾಗ ಚಿನ್ನುವನ್ನು ಸೂಕ್ಷ್ಮವಾಗಿ ಗಮನಿಸಿ. ಆಗ ಆಕೆಯ ಎಡಗಣ್ಣು ತುಂಬಾ ಚಿಕ್ಕದಾಗಿ ಕಾಣುತ್ತದೆ. ಮೇಲ್ನೋಟಕ್ಕೆ ಮಾತ್ರ ಚಿನ್ನುಗೆ ಕಣ್ಣು ಕಾಣುತ್ತದೆ. ಆದರೆ ಎಡಗಣ್ಣಿನ ದೃಷ್ಟಿಯನ್ನ ಸುಮಾರು ವರ್ಷಗಳ ಹಿಂದೆಯೇ ಆಕೆ ಕಳೆದುಕೊಂಡಿದ್ದಾರೆ.
Advertisement
Advertisement
ನನಗೆ ಸುಮಾರು 6-7 ವರ್ಷವಿದ್ದಾಗಲೇ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದೇನೆ. ಶಿವರಾತ್ರಿ ಹಬ್ಬ ಆಚರಣೆ ಮಾಡುತ್ತಿದ್ದಾಗ ಕೈಯಲ್ಲಿ ಸುಣ್ಣದ ಡಬ್ಬಿ ಹಿಡಿದು ಆಟವಾಡುತ್ತಿದ್ದೆ. ಆಗ ಸುಣ್ಣ ಎರಡೂ ಕಣ್ಣಿಗೆ ಎಗರಿಬಿಟ್ಟಿತು. ತಕ್ಷಣವೇ ನೀರಿನಿಂದ ಕಣ್ಣಿನಲ್ಲಿರುವ ಸುಣ್ಣವನ್ನ ತೆಗೆದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಆಗಲೇ ನಾನು 70% ಕಣ್ಣಿಗೆ ದೃಷ್ಟಿಯನ್ನು ಕಳೆದುಕೊಂಡಿದ್ದೆ ಎಂದು ರಶ್ಮಿ ಪ್ರಭಾಕರ್ ಅವರು ಹೇಳಿದ್ದಾರೆ.
Advertisement
Advertisement
ನನಗೆ ಬಾಲ್ಯದಿಂದಲೂ ನ್ಯೂಸ್ ರೀಡರ್ ಆಗಬೇಕು ಎಂದು ಕನಸು ಕಂಡಿದ್ದೆ. ಒಂದಿಷ್ಟು ದಿನ ಕಾಲ ಖಾಸಗಿ ಚಾನೆಲ್‍ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದೆ. ಬಳಿಕ ಧಾರಾವಾಹಿಯಲ್ಲಿ ಅಭಿನಯಿಸುವ ಆಫರ್ ಬಂತು. ಚಿಕ್ಕವಯಸ್ಸಿನಲ್ಲಿ ತನ್ನ ಸಂಬಂಧಿಯಾಗಿದ್ದ ನಟಿ ಸೌಂದರ್ಯರನ್ನ ನೋಡಿಕೊಂಡು ಬೆಳೆದಿದ್ದರಿಂದ ತಾನೂ ನಟಿಯಾಗಬೇಕು ಅಂತ ಆಸೆಪಟ್ಟಿದ್ದೆ. ಆದರೆ ಎಡಗಣ್ಣು ಚಿಕ್ಕದಾಗಿ ಇದ್ದಿದ್ದರಿಂದ ಸಾಕಷ್ಟು ಪಾತ್ರಗಳು ಮಿಸ್ ಆದವು. ಆದರೂ ನಾನು ತಲೆಕೆಡಿಸಿಕೊಳ್ಳದೇ ಮುಂದೊಂದು ದಿನ ಮುಖ್ಯಪಾತ್ರಧಾರಿಯಾಗಿ ಮಿಂಚುತ್ತೀನಿ ಅಂತ ವರ್ಷಗಳ ಕಾಲ ಕಾಯುತ್ತಿದ್ದೆ ಎಂದು ರಶ್ಮಿ ಹೇಳಿದ್ದಾರೆ.
`ಲಕ್ಷ್ಮೀಬಾರಮ್ಮ’ ಧಾರಾವಾಹಿಯ ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟರು. ಇತ್ತೀಚೆಗೆ ಎಡಗಣ್ಣಿಗೆ ಒಂದು ಸರ್ಜರಿಯಾಗಿ ಒಂದು ತಿಂಗಳು ವಿಶ್ರಾಂತಿ ಪಡೆದು ಧಾರಾವಾಹಿಗೆ ಬಂದೆ. ಆಗ ನಿರ್ದೇಶಕರು ನಿನ್ನ ಕೈಯಲ್ಲಿ ಆಗುತ್ತದೆ ಮಾಡು ಎಂದು ನಂಬಿಕೆಯಿಂದ ಚಿನ್ನು ಪಾತ್ರವನ್ನು ಮಾಡಿಸಿದರು. ಅವರಿಗೆ ಮತ್ತು ತನ್ನ ತಂಡದವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ.
ಧಾರಾವಾಹಿ ಮಾಡುವಾಗ ಚಿನ್ನುಗೆ ಕಷ್ಟಗಳ ಮೇಲೆ ಕಷ್ಟ ಬರುತ್ತದೆ. ನಗುವುದಕ್ಕಿಂತ ಕಣ್ಣೀರು ಸುರಿಸುವುದೇ ಹೆಚ್ಚು. ಈಗಾಗಲೇ ಕಣ್ಣು ದೃಷ್ಟಿ ಕಳೆದುಕೊಂಡಿರುವುದರಿಂದ ಕಣ್ಣಿಗೆ ಗ್ಲಿಸರಿನ್ ಹಾಕುವಂತಿಲ್ಲ. ಎಮೋಷನಲ್ ಸೀನ್ ಮಾಡುವಾಗ ಪರಕಾಯ ಪ್ರವೇಶ ಮಾಡಿ ಅಳುವ ಸೀನ್‍ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅಳುವಾಗ ಎಡಗಣ್ಣು ನೋವಾಗುತ್ತದೆಯಂತೆ. ಆದರೂ ಅಭಿಮಾನಿಗಳನ್ನ ರಂಜಿಸುವುದಕ್ಕೆ ಚಿನ್ನು ಕಣ್ಣೀರು ಹಾಕಲೆಬೇಕು.
ಲಕ್ಷ್ಮೀಬಾರಮ್ಮ ಸೀರಿಯಲ್ ಮೂಲಕ ನಿಮ್ಮೆಲ್ಲರ ಮುಂದೆ ಚಿನ್ನು ಆಗಿ ನಿಲ್ಲಲಿಕ್ಕೆ ರಶ್ಮಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಹನಟಿಯಾಗಿ ಕಿರುತೆರೆ ಜಗತ್ತಿಗೆ ಬಂದು ಹಲವಾರು ಜನರಿಂದ ಟೀಕೆಗೊಳಗಾದ ರಶ್ಮಿ, ಇವತ್ತು ಲೀಡಿಂಗ್ ನಟಿಯಾಗಿ ಮಿಂಚುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv