ಗುವಾಹಾಟಿ: ಸ್ವಾತಂತ್ರ್ಯ ದಿನಾಚರಣೆಯಂದು ಪ್ರವಾಹ ಪೀಡಿತ ಅಸ್ಸಾಂನ ಸರ್ಕಾರಿ ಶಾಲೆಯೊಂದರಲ್ಲಿ ಮೊಣಕಾಲುದ್ದ ನೀರು ನಿಂತಿದ್ದರೂ ಅದರ ಮಧ್ಯೆ ನಿಂತು ಧ್ವಜಾರೋಹಣ ಮಾಡಿದ್ದರು. ಶಿಕ್ಷಕರು ಹಾಗೂ ಮಕ್ಕಳು ನೀರಿನ ಮಧ್ಯೆ ನಿಂತು ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ರಾಷ್ಟ್ರೀಯ ಹಾಗೂ ಕೆಲವು ಅಂತಾರಾಷ್ಟ್ರೀಯ ವೆಬ್‍ಸೈಟ್‍ಗಳಲ್ಲೂ ವರದಿಯಾಗಿತ್ತು. ಇದೀಗ ಈ ಫೋಟೋ ತೆಗೆದಿದ್ದು ಯಾಕೆ ಎಂಬ ಸತ್ಯ ಬಯಲಾಗಿದೆ.
ರಾಜ್ಯದ ನಿಯಮದ ಪ್ರಕಾರ ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನ ಫೋಟೋಗಳ ಸಮೇತ ದಾಖಲು ಮಾಡಬೇಕು. ಹಾಗೇ ಈ ಫೋಟೋವನ್ನ ಗುವಾಹಾಟಿಯ ರಾಜ್ಯ ಶಿಕ್ಷಣ ಇಲಾಖೆಗೆ ಕಳುಹಿಸುವ ಸಲುವಾಗಿ ತೆಗೆಯಲಾಗಿತ್ತು. ಫೋಟೋದಲ್ಲಿ ಕಾಣುವ ಇಬ್ಬರು ವಿದ್ಯಾರ್ಥಿಗಳಿಗೆ ಈಜು ಬರುತ್ತಿದ್ದ ಕಾರಣ ಅವರನ್ನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ನಾಲ್ವರು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಗೂ ವಂದೇಮಾತರಂ ಹಾಡಿದ್ದು, ಉಳಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಹೊರಗೆ ನಿಂತು ವೀಕ್ಷಿಸಿದ್ರು ಎಂದು ವರದಿಯಾಗಿದೆ.
ಇಲ್ಲಿನ ಧುಬ್ರಿ ಜಿಲ್ಲೆಯ ದಿ ನಸ್ಕಾರಾ ಲೋವರ್ ಪ್ರೈಮರಿ ಸ್ಕೂಲ್ ನ ಮುಖ್ಯ ಶಿಕ್ಷಕ ತಝೀಮ್ ಸಿಕ್ದರ್ ಹಾಗೂ ಸಹೋದ್ಯೋಗಿಗಳಾದ ಸ್ರಿಪೆನ್ ರಬಾ, ಜಾಯ್‍ದೇವ್ ರಾಯ್, ಮಿಜಾನುರ್ ರೆಹ್‍ಮಾನ್ ಪ್ರವಾಹದ ಮಧ್ಯೆಯೂ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ತೀರ್ಮಾನಿಸಿದ್ರು. ಇಬ್ಬರು ವಿದ್ಯಾರ್ಥಿಗಳಾದ ಜಿಯಾರುಲ್ ಸಲಿ ಖಾನ್ ಮತ್ತು ಹೈದರ್ ಸಲಿ ಖಾನ್‍ನನ್ನು ಫೋಟೋದಲ್ಲಿ ಕಾಣಬಹುದು. ಶಾಲೆಯ ಶಿಕ್ಷಕರಾದ ಮಿಜಾನುರ್ ರೆಹಮಾನ್ ಈ ಫೋಟೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿತ್ತು.
ಎರಡು ದಿನಗಳ ನಂತರ ಅವರು ಮತ್ತೊಮ್ಮೆ ಈ ಬಗ್ಗೆ ಪೋಸ್ಟ್ ಮಾಡಿದ್ದು, ಈ ಭಾಗದ ಎಲ್ಲಾ ಜನರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಪ್ರವಾಹದ ನಡುವೆಯೂ ನೀವು ನಿಮ್ಮ ನಿಜವಾದ ದೇಶಭಕ್ತಿ ಹಾಗೂ ದೇಶದ ಮೇಲಿನ ಪ್ರೀತಿ ವ್ಯಕ್ತಪಡಿಸುವುದನ್ನ ಮರೆಯಲಿಲ್ಲ. ದೇಶದ ಮೇಲಿನ ಪ್ರೀತಿ ಹಾಗೂ ಬದ್ಧತೆಗೆ ಈ ಯಶಸ್ಸೇ ಪ್ರತಿಬಿಂಬ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಆದ್ರೆ ಮತ್ತೊಂದು ವಿಷಾದಕರ ಸಂಗತಿಯೆಂದರೆ ರೆಹಮಾನ್ ಅವರು ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿದ ಕೆಲವೇ ಗಂಟೆಗಳಲ್ಲೇ ಅವರ 18 ವರ್ಷದ ಸಹೋದರ ಸಂಬಂಧಿ ರಶೀದುಲ್ ಇಸ್ಲಾಂ ಫಕೀರ್‍ಗಂಜ್‍ನಲ್ಲಿ ಮುಳುಗಿಹೋಗಿದ್ದರು. ಇಸ್ಲಾಂ ಅವರು ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ ಈ ವೈರಲ್ ಫೋಟೋದಿಂದಾದ್ರೂ ಪ್ರಾವಹ ಪೀಡಿತ ಧುಬ್ರಿಯ 484 ಗ್ರಾಮಗಳತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಾರೆ ಎಂದು ರೆಹಮಾನ್ ಅವರ ಕುಟುಂಬ ನಂಬಿದೆ.
https://www.facebook.com/mizanur.rahman.50552/videos/pcb.1789351124426262/1789349987759709/?type=3&theater
https://www.facebook.com/mizanur.rahman.50552/videos/pcb.1789351124426262/1789354911092550/?type=3&theater
https://www.facebook.com/photo.php?fbid=1790020037692704&set=a.436854836342571.115881.100000541760233&type=3&theater
https://www.facebook.com/mizanur.rahman.50552/posts/1791323744229000