– ಜಿಲ್ಲೆಯ 33 ಕೆರೆಗಳ ಪುನಶ್ಚೇತನ ಕಾರ್ಯ
– ರೈತರ ಜಮೀನುಗಳಿಗೆ ಉಚಿತವಾಗಿ ಸಿಗುತ್ತಿದೆ ಫಲವತ್ತಾದ ಮಣ್ಣು
– ಖಾಸಗಿಯವರಿಂದ ಕೋಟ್ಯಂತರ ರೂಪಾಯಿ ಸಹಾಯ ಧನ
ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಭೀಕರ ಬರಗಾಲ ಎದುರಿಸುತ್ತಿದೆ. ಒಂದು ವೇಳೆ ಒಳ್ಳೆಯ ಮಳೆ ಬಂದರೂ ನೀರನ್ನ ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಯೂ ಜಿಲ್ಲೆಯಲ್ಲಿಲ್ಲ. ಹೂಳು ತುಂಬಿರುವ ಜಿಲ್ಲೆಯ ನೂರಾರು ಕೆರೆಗಳು ಇದ್ದರೂ ಇಲ್ಲದಂತಾಗಿದೆ. ಹೀಗಾಗಿ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದ್ದು ಕೆರೆಗಳ ಹೂಳು ತೆಗೆಯುತ್ತಿದೆ. ಒಂದಿಡೀ ಸರ್ಕಾರ ಮಾಡಬೇಕಾದ ಕೆಲಸವನ್ನ ಖಾಸಗಿಯವರು ಮಾಡುತ್ತಿದ್ದಾರೆ.
Advertisement
ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ, ಕೃಷ್ಣ ನದಿಗಳೆರಡು ಇದ್ದರೂ ಜಿಲ್ಲೆಯ ಜನ ಹಾಗೂ ರೈತರು ಪ್ರತೀ ವರ್ಷ ನೀರಿನ ಭೀಕರ ಸಮಸ್ಯೆಯನ್ನ ಎದುರಿಸುತ್ತಲೇ ಇದ್ದಾರೆ. ನಾಲ್ಕು ವರ್ಷಕ್ಕೊಮ್ಮೆ ಉತ್ತಮ ಮಳೆ ಬಂದರೆ ಆ ನೀರನ್ನ ಸದ್ಬಳಕೆ ಮಾಡಿಕೊಳ್ಳಲು ಆಗದೆ ರೈತರು ಪುನಃ ಕಂಗಾಲಾಗಿ ಕುಳಿತುಕೊಳ್ಳುತ್ತಲೇ ಇದ್ದಾರೆ. ಹೀಗಾಗಿ ನೀತಿ ಆಯೋಗದ ಸೂಚನೆ ಮೇರೆಗೆ ಭಾರತೀಯ ಜೈನ ಸಮುದಾಯ ರಾಯಚೂರು ಹಾಗೂ ಯಾದಗಿರಿಯ ಕೆರೆಗಳ ಹೂಳೆತ್ತುವ ಕಾಯಕ ಕೈಗೆತ್ತಿಕೊಂಡಿದೆ.
Advertisement
Advertisement
ಸರ್ಕಾರದೊಂದಿಗೆ ಕೇವಲ ಡೀಸೆಲ್ ನೀಡಲು ಒಪ್ಪಂದ ಮಾಡಿಕೊಂಡಿದ್ದು ಯಂತ್ರೋಪಕರಣ, ಹೂಳು ವಿಲೇವಾರಿ, ಜಾಗೃತಿ ಕಾರ್ಯಕ್ರಮಗಳ ಹೊಣೆಯನ್ನ ಭಾರತೀಯ ಜೈನ ಸಮುದಾಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ವಹಿಸುತ್ತಿವೆ. ಈಗಾಗಲೇ ಫೆಬ್ರವರಿಯಿಂದ ಜಿಲ್ಲೆಯಲ್ಲಿ ಕಟ್ಲಾಟಕೂರ್, ಉಪ್ಪಾರನಂದಿಹಾಳ, ತುಂಟಾಪುರ ಸೇರಿ ಏಳು ಕೆರೆಗಳ ಹೂಳು ತೆಗೆಯಲಾಗುತ್ತಿದೆ. ಜಿಲ್ಲೆಯಲ್ಲಿ 5 ಲಕ್ಷ ಕ್ಯೂಬಿಕ್ ಮೀಟರ್, ಯಾದಗಿರಿಯಲ್ಲಿ 11 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನ ತೆಗೆಯಲಾಗಿದ್ದು ರೈತರಿಗೆ ಉಚಿತವಾಗಿ ಮಣ್ಣನ್ನ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಲಾಗಿದೆ ಅಂತ ಬಿಜೆಎಸ್ ರಾಜ್ಯ ಸಂಘಟಕ ಕಮಲ್ ಕುಮಾರ್ ಜೈನ್ ತಿಳಿಸಿದ್ದಾರೆ.
Advertisement
ಜಿಲ್ಲಾಡಳಿತದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸ್ಥಳೀಯ ಖಾಸಗಿ ಸಂಸ್ಥೆಗಳು ಸಹ ಕೆರೆ ಹೂಳು ತೆಗೆಯಲು ಸಹಕಾರ ನೀಡುತ್ತಿವೆ. ರೈತರು ಸ್ವಯಂ ಪ್ರೇರಿತರಾಗಿ ಫಲವತ್ತಾದ ಮಣ್ಣನ್ನ ತಮ್ಮ ಖರ್ಚಿನಲ್ಲೆ ತೆಗೆದುಕೊಂಡು ಹೋಗುತ್ತಿದ್ದಾರೆ. 8 ರಿಂದ 9 ಅಡಿಯಷ್ಟು ಹೂಳನ್ನ ಪ್ರತಿ ಕೆರೆಯಲ್ಲೂ ತೆಗೆಯಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 33 ಕೆರೆಗಳನ್ನ ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ 7 ಕೆರೆಗಳ ಹೂಳು ತೆಗೆಯಲಾಗುತ್ತಿದ್ದು, ಮೊದಲ ಹಂತದ ಕೆಲಸ ಮುಕ್ತಾಯ ಹಂತಕ್ಕೆ ತಲುಪಿದೆ. ಇದರಿಂದ ಜಿಲ್ಲೆಯ ರೈತರು ಖುಷಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಬರಗಾಲದ ನಾಡಲ್ಲಿ ಜಲ ಸಂವರ್ಧನೆ ಹಾಗು ಕೆರೆಗಳ ಪುನಶ್ಚೇತನ ಕಾರ್ಯ ಸದ್ದಿಲ್ಲದೆ ನಡೆದಿದೆ. ಮಳೆ ಬಂದಾಗ ಹಳ್ಳಗಳಿಗೆ ಹರಿದು ಪೋಲಾಗುತ್ತಿದ್ದ ನೀರು ಇನ್ಮುಂದೆ ಕೆರೆಯಲ್ಲಿ ನಿಲ್ಲಲಿದೆ. ನೀರಿನ ಸಮಸ್ಯೆ ಎದುರಿಸುತ್ತಲೇ ಇರುವ ರೈತರಿಗೆ ಈಗ ಭರವಸೆಯ ಬೆಳಕೊಂದು ಕಾಣಿಸುತ್ತಿದೆ.