ಮಡಿಕೇರಿ: ಸರ್ಕಾರ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಾಕಷ್ಟು ಹಣವನ್ನು ವ್ಯಯಿಸುತ್ತಿದೆ. ಆದರೆ ಕೊಡಗಿನಲ್ಲಿ ಕೆರೆ ರಕ್ಷಣೆ ಮಾಡಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿ, ಜಿಲ್ಲಾಧಿಕಾರಿಯ ಮೊರೆ ಹೋದರೂ ಏನೂ ಪ್ರಯೋಜನವಾಗಿಲ್ಲ. ಕೆರೆ ಒತ್ತಿನಲ್ಲಿದ್ದ ಕೆಲ ರೈತರು ಒತ್ತುವರಿ ಮಾಡಿ ಮುಕ್ಕಾಲು ಭಾಗ ಕೆರೆಯನ್ನೇ ನುಂಗಿ ನೀರು ಕುಡಿದಿದ್ದಾರೆ. ಹೀಗಾಗಿ ಗ್ರಾಮಸ್ಥರು ಕೆರೆ ಸಂರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ.
Advertisement
ಹೌದು. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸಮೀಪದ ಹೆಗ್ಗಡಹಳ್ಳಿ ಕೋಟೆಯಲ್ಲಿ ಪುರಾತನ ಕಾಲದ ಬಹುದೊಡ್ಡ ಕೆರೆಯನ್ನೇ ಕೆಲವರು ನುಂಗಿ ನೀರು ಕುಡಿದಿದ್ದಾರೆ. ಇಲ್ಲಿನ ದಂಡಿನಮ್ಮ ದೇವಾಲಯದ ಸರ್ವೆ ನಂಬರ್ 56ರಲ್ಲಿ ಬರೋಬ್ಬರಿ 30 ಎಕ್ರೆಯಷ್ಟಿದ್ದ ಕೆರೆಯನ್ನು ಪಕ್ಕದಲ್ಲೇ ಇರುವ ನಾಲ್ಕೈದು ರೈತರು ಸಂಪೂರ್ಣ ಒತ್ತುವರಿ ಮಾಡಿದ್ದಾರೆ. ಒತ್ತುವರಿ ಮಾಡಿರುವ ಜಾಗದಲ್ಲಿ ಗದ್ದೆ, ತೋಟಗಳನ್ನು ಮಾಡಿ ಸಿಲ್ವರ್, ತೆಂಗು ಸೇರಿದಂತೆ ವಿವಿಧ ಮರಗಳನ್ನು ಬೆಳೆಸಿದ್ದಾರೆ. ಹೀಗಾಗಿ 30 ಎಕ್ರೆಯಷ್ಟು ಇದ್ದ ಕೆರೆ ಇದೀಗ ಕೇವಲ 10 ರಿಂದ ಹನ್ನೆರಡು ಎಕ್ರೆ ಮಾತ್ರವೇ ಉಳಿದಿದೆ.
Advertisement
Advertisement
ಕೆರೆ ಒತ್ತುವರಿಯಾಗಿರುವ ಜೊತೆಗೆ ಉಳಿದಿರುವ ಕೆರೆಯಲ್ಲೂ ಸಂಪೂರ್ಣ ಹೂಳು ತುಂಬಿಕೊಂಡಿದೆ. ಹೀಗಾಗಿ ಕೂಡಿಗೆ, ಹೆಗ್ಗಡಹಳ್ಳಿ, ಹೆಗ್ಗಡಹಳ್ಳಿ ಕೋಟೆಯ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಇನ್ನೆರಡು ವರ್ಷ ಕಳೆದರೆ ಉಳಿದಿರುವ 10 ಎಕ್ರೆಯಷ್ಟು ಕೆರೆಯೂ ಸಂಪೂರ್ಣ ಒತ್ತುವರಿಯಾಗಲಿದೆ ಎನ್ನೋದು ಜನರ ಆತಂಕವಾಗಿದೆ.
Advertisement
ಸರ್ವೆಗೆ ಬರುವ ಅಧಿಕಾರಿಗಳು ಸ್ಥಳೀಯ ರಾಜಕೀಯ ಪುಡಾರಿಗಳ ಮಾತುಕೇಳಿ ವಾಪಸ್ಸು ಹೋಗುತ್ತಿದ್ದಾರೆ. ಒಂದು ವೇಳೆ ಸರ್ವೆ ಮಾಡಿದರೂ ಒತ್ತುವರಿದಾರರಿಂದ ಲಂಚ ಪಡೆದು ಸರ್ವೆ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳುವುದೇ ಇಲ್ಲ. ಹೀಗಾಗಿ ಒತ್ತುವರಿದಾರರ ವಿರುದ್ಧ 2019 ಸೆಪ್ಟೆಂಬರ್ ತಿಂಗಳಲ್ಲೇ ಜಿಲ್ಲಾಧಿಕಾರಿಗೂ ದೂರು ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.
ಈ ಬಗ್ಗೆ ಒತ್ತುವರಿದಾರರನ್ನು ಕೇಳಿದರೆ, ಹೌದು. ಕೆರೆ ಜಾಗ ಒತ್ತುವರಿ ಮಾಡಿಕೊಂಡಿದ್ದೇವೆ. ಎಲ್ಲರಿಂದಲೂ ತೆರವು ಮಾಡಿದರೆ ನಾವು ಬಿಟ್ಟುಕೊಡ್ತೇವೆ. ಮೂಲ ದಾಖಲೆಯಲ್ಲಿ ಇರುವಷ್ಟು ಕೆರೆ ಜಾಗ ಈಗಲೂ ಇದೆ. ಆದರೆ ಹಾರಂಗಿ ಜಲಾಶಯ ನಿರ್ಮಾಣವಾದಾಗ ಆ ಇಲಾಖೆ ಕೆರೆಯ ಸುತ್ತ ಇದ್ದ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಜಾಗ ಒತ್ತುವರಿಯಾಗಿದ್ದು, ಅಧಿಕಾರಿಗಳು ಸರಿಯಾದ ದಾಖಲೆ ಇಲ್ಲದೆ ಸರ್ವೆಗೆ ಬರುತ್ತಾರೆ. ಹೀಗಾಗಿ ಅದು ಅಪೂರ್ಣವಾಗಿ ವಾಪಸ್ಸು ಹೋಗುತ್ತಿದ್ದಾರೆ ಎನ್ನುತ್ತಿದ್ದಾರೆ.