ಸಾಮಾನ್ಯವಾಗಿ ಸರೋವರ ಅಂದ್ರೆ ಹರಿಯುತ್ತಿರುವ ಶುದ್ಧ ನೀರು, ಅದರಲ್ಲಿ ಅರಳುವ ಕಮಲ ಮೊದಲು ನೆನಪಾಗುತ್ತದೆ. ಬಹುತೇಕರಿಗೆ ಸರೋವರದಲ್ಲಿ ಕಾಲ ಕಳೆಯುವುದು ಬಹಳ ಇಷ್ಟವಾದ ಕೆಲಸಗಳಲ್ಲಿ ಒಂದು. ಏಕೆಂದರೆ ಸರೋವರಗಳ ಪ್ರಶಾಂತವಾದ ವಾತಾವರಣ, ಪಕ್ಷಿಗಳ ಚಿಲಿಪಿಲಿ, ಹಸಿರಿನಿಂದ ಆವೃತವಾಗಿರುವ ಪ್ರದೇಶ, ಸೂರ್ಯಾಸ್ತ ಎಂಥವರನ್ನೂ ಮರಳುಗೊಳಿಸುತ್ತದೆ. ಸರೋವರದಲ್ಲಿ ದೋಣಿ ಸವಾರಿಯು ಮತ್ತಷ್ಟು ಉಲ್ಲಾಸಕರವಾದ ಅನುಭವವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ನಗರದ ದಟ್ಟಣೆ, ಧೂಳು, ಮಾಲಿನ್ಯಕಾರಕ ಗಾಳಿಯಿಂದ ದೂರವಿರಲು ಸರೋವರ, ಉದ್ಯಾನಗಳನ್ನು ಹುಡುಕಿಕೊಂಡು ಹೋಗುವುದು ನಿಜಕ್ಕೂ ಅತ್ಯುತ್ತಮ ಮಾರ್ಗ. ಆದರೆ ಇಲ್ಲೊಂದು ಸರೋವರದಲ್ಲಿ ಯಾವುದಾದರೂ ಪ್ರಾಣಿ, ಪಕ್ಷಿ ಬಿದ್ದರೆ ಕಲ್ಲಾಗುತ್ತವೆ. ಅರೇ ಇದು ಯಾವ ರೀತಿಯ ಸರೋವರ ಅಂಥ ಯೋಚಿಸುತ್ತಿದ್ದೀರಾ? ಆಫ್ರಿಕಾದ ಟಾಂಜಾನಿಯಾದಲ್ಲಿ ಈ ರೀತಿಯ ವಿಚಿತ್ರವಾದ ಸರೋವರವೊಂದಿದೆ.
ಹೌದು, ಆಫ್ರಿಕಾದ ಟಾಂಜಾನಿಯಾದಲ್ಲಿ ಕೀನ್ಯಾ ಗಡಿಯ ಸಮೀಪವಿರುವ ನೇಟ್ರಾನ್ ಸರೋವರ ತನ್ನ ಕೆಂಪು ಬಣ್ಣ ಮತ್ತು ನಿಗೂಢ ಸ್ವಭಾವಕ್ಕಾಗಿ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಇದು ಅತ್ಯಂತ ಕ್ಷಾರೀಯ ಮತ್ತು ಬಿಸಿ ನೀರಿನ ಸರೋವರವಾಗಿದ್ದು, ಅದರಲ್ಲಿರುವ ನೀರು ಜೀವಿಗಳಿಗೆ ಮಾರಕ. ಅಲ್ಲಿ ಬಿದ್ದ ಪಕ್ಷಿಗಳು ಅಥವಾ ಪ್ರಾಣಿಗಳು ನಿಧಾನವಾಗಿ ಕಲ್ಲಿನಂತಾಗುತ್ತವೆ. ಅದಕ್ಕಾಗಿಯೇ ಇದನ್ನು ‘ಮಾರಕ ಸರೋವರ’ ಎಂದೂ ಕರೆಯಲಾಗುತ್ತದೆ.

ಈ ಸರೋವರದ ಉಷ್ಣತೆ ಕೆಲವೊಮ್ಮೆ 60 ಡಿಗ್ರಿ ಸೆಲ್ಸಿಯಸ್‌ವರೆಗೆ ಏರುತ್ತದೆ. ಇದರಲ್ಲಿ ಇರುವ ಸೋಡಿಯಂ ಕಾರ್ಬೋನೇಟ್ ಮತ್ತು ಇತರ ಜ್ವಾಲಾಮುಖಿ ಖನಿಜಗಳು ನೀರನ್ನು ಅತ್ಯಂತ ಕ್ಷಾರೀಯಗೊಳಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬಹುತೇಕ ಜೀವಿಗಳು ಬದುಕಲು ಸಾಧ್ಯವಿಲ್ಲ. ಆದರೆ ಈ ಸರೋವರವು ಸಾವಿರಾರು ಫ್ಲೆಮಿಂಗೊ ಪಕ್ಷಿಗಳಿಗೆ ನೆಲೆಯಾಗಿದೆ. ಆಶ್ಚರ್ಯ ಎನಿಸಿದರೂ ಇದು ಸತ್ಯ.
ಸರೋವರ ಕೆಂಪಾಗಲು ಕಾರಣವೇನು?
ನೇಟ್ರಾನ್ ಸರೋವರದ ಕೆಂಪು ಮತ್ತು ಗುಲಾಬಿ ಬಣ್ಣವು ಸೈನೋಬ್ಯಾಕ್ಟೀರಿಯಾ ಎನ್ನುವ ಸೂಕ್ಷ್ಮ ಜೀವಿಗಳಿಂದ ಉಂಟಾಗುತ್ತದೆ. ಇವು ಉಪ್ಪಿನ ನೀರಿನಲ್ಲಿ ಬೆಳೆಯುತ್ತವೆ ಮತ್ತು ತಮ್ಮ ವರ್ಣದ್ರವ್ಯಗಳಿಂದ ಸರೋವರಕ್ಕೆ ರಕ್ತದಂತಹ ನೋಟ ನೀಡುತ್ತವೆ. ಬೇಸಿಗೆಯ ಸಮಯದಲ್ಲಿ ನೀರಿನ ಮಟ್ಟ ಕಡಿಮೆಯಾಗುವಾಗ, ಉಪ್ಪಿನ ಪದರವು ಮೇಲ್ಮೈಯಲ್ಲಿ ರೂಪುಗೊಳ್ಳುತ್ತದೆ, ಇದು ಸರೋವರದ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಸರೋವರದ ನೀರಿನ ಕ್ಷಾರೀಯತೆಯ ಮಟ್ಟ ಅಷ್ಟೊಂದು ಹೆಚ್ಚಾಗಿದೆ ಎಂಬುದರಿಂದ, ಯಾವುದೇ ಸಣ್ಣ ಜೀವಿ ಅಥವಾ ಪಕ್ಷಿ ಅದರಲ್ಲಿ ಬಿದ್ದರೆ, ಅದರ ಚರ್ಮ ಸುಟ್ಟು ಹೋಗುತ್ತದೆ ಮತ್ತು ಕಾಲಕ್ರಮೇಣ ಅದು ಮಮ್ಮಿಯಂತಾಗುತ್ತದೆ. ಸರೋವರದ ನೀರನಲ್ಲಿ ಸೋಡಾ ಮತ್ತು ಉಪ್ಪಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. ಪ್ರಾಣಿಗಳು ಹೇಗೆ ಸಾಯುತ್ತವೆ. ಅವು ಯಾಕೆ ಕಾಂಕ್ರೀಟ್ ಆಗಿ ಪರಿವರ್ತನೆ ಆಗುತ್ತವೆ ಅನ್ನೋದಕ್ಕೆ ಕಾರಣ ತಿಳಿದಿಲ್ಲ. ನೀರಿಗೆ ಇಳಿಯುತ್ತಿದ್ದಂತೆಯೇ ಅವುಗಳ ದೇಹ ಕೊಳೆಯಲು ಶುರುವಾಗುತ್ತದೆ. ನಂತರ ಆ ಪ್ರಾಣಿ, ಪಕ್ಷಿಗಳ ಆಕಾರವು ಸರೋವರದ ರೀತಿಯಲ್ಲೇ ಆಗುತ್ತದೆ. ಗಟ್ಟಿಯಾಗುತ್ತದೆ, ಕಲ್ಲಿನಂತೆ ಕಾಣುತ್ತದೆ. ಸಾವಿನ ನಂತರ ಪ್ರಾಣಿಗಳ ದೇಹವು ಅದೇ ರೂಪದಲ್ಲಿ ಉಳಿಯುತ್ತದೆ. ಈ ಪ್ರಕ್ರಿಯೆಯ ಕಾರಣದಿಂದಲೇ ಸರೋವರವು ಮಾನವರಿಗೂ, ವಿಜ್ಞಾನಕ್ಕೂ ಒಂದು ಸವಾಲು ಎನಿಸಿದೆ.

ಫ್ಲೆಮಿಂಗೊ ಪಕ್ಷಿಗಳಿಗೆ ನೆಲೆ:
ಈ ಮಾರಕ ಸರೋವರವೇ ಪೂರ್ವ ಆಫ್ರಿಕಾದ ಲೆಸ್ಸರ್ ಫ್ಲೆಮಿಂಗೊಗಳ ಏಕೈಕ ಸಂತಾನೋತ್ಪತ್ತಿ ಸ್ಥಳವಾಗಿದೆ. ಪ್ರತಿ ವರ್ಷ ಲಕ್ಷಾಂತರ ಫ್ಲೆಮಿಂಗೊಗಳು ಇಲ್ಲಿ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸುತ್ತವೆ. ಸರೋವರದಲ್ಲೇ ಬೆಳೆಯುವ ಸ್ಪಿರುಲಿನಾ ಅವುಗಳ ಪ್ರಮುಖ ಆಹಾರವಾಗಿದ್ದು, ಅವುಗಳ ಗುಲಾಬಿ ಬಣ್ಣಕ್ಕೂ ಕಾರಣವಾಗಿದೆ. ಫ್ಲೆಮಿಂಗೊಗಳು ಕಠಿಣ ಪರಿಸರಕ್ಕೆ ಹೊಂದಿಕೊಂಡಿವೆ ಮತ್ತು ಅವುಗಳ ಕಾಲುಗಳು ನೀರಿನ ಹಾನಿಕಾರಕ ಪರಿಣಾಮಗಳನ್ನು ನಿಭಾಯಿಸುವಷ್ಟು ಗಟ್ಟಿಯಾಗಿರುತ್ತವೆ.
ನೇಟ್ರಾನ್ ಸರೋವರದ ಹತ್ತಿರದಲ್ಲಿರುವ ಒಲ್ ಡೊಯಿನ್ಯೊ ಲೆಂಗೈ ಜ್ವಾಲಾಮುಖಿ ವಿಶ್ವದ ಏಕೈಕ ಕಾರ್ಬೊನೈಟ್ರೇಟ್ ಜ್ವಾಲಾಮುಖಿಯಾಗಿದ್ದು, ಅದು ಹೊರಸೂಸುವ ಖನಿಜಗಳು ಸರೋವರಕ್ಕೆ ಸೇರಿ ಅದರ ನೀರನ್ನು ರಾಸಾಯನಿಕವಾಗಿ ವಿಭಿನ್ನಗೊಳಿಸುತ್ತವೆ. ಇದರ ಫಲವಾಗಿ ಸರೋವರದ ಉಷ್ಣತೆ ಮತ್ತು ರಚನೆ ವಿಭಿನ್ನವಾಗಿದೆ.

ಟಾಂಜಾನಿಯಾದ 6ನೇ ಅತಿದೊಡ್ಡ ಸರೋವರ:
ಅಂದಹಾಗೆ ಈ ಸರೋವರವು 35 ಮೈಲಿಗಳಷ್ಟು ಉದ್ದ, 14 ಮೈಲಿಗಳಷ್ಟು ಅಗಲವಿದೆ. ಅದರ ಗಾತ್ರದ ಹೊರತಾಗಿಯೂ ಟಾಂಜಾನಿಯಾದ ಆರನೇ ದೊಡ್ಡ ಸರೋವರ ಇದಾಗಿದೆ. ಈ ಸರೋವರವನ್ನು ದೇವರ ಪರ್ವತ ಎಂದೂ ಕೂಡ ಕರೆಯುತ್ತಾರೆ. ಮಸಾಯಿ ಜನರು ನೇಟ್ರಾನ್ ಸರೋವರದ ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅದನ್ನು ಅವರು ಪವಿತ್ರವೆಂದು ಪರಿಗಣಿಸುತ್ತಾರೆ. ತಜ್ಞರ ಪ್ರಕಾರ ಪ್ರಾಚೀನ ಈಜಿಪ್ಟನ್ನವರು ಸತ್ತವರ ದೇಹಗಳಲ್ಲಿ ಮಮ್ಮಿ ಮಾಡಲು ಸರೋವರವನ್ನು ಬಳಸುತ್ತಿದ್ದರು ಎಂದು ನಂಬಿದ್ದಾರೆ. ನೇಟ್ರಾನ್ ಸರೋವರದ ಉಪ್ಪಿನ ನೀರಿನಲ್ಲಿ ಬದುಕಲು ವಿಕಸನಗೊಂಡ ಒಂದು ಜಾತಿಯ ಮೀನಿನ ಹೊರತಾಗಿ ಬೇರೇ ಯಾವುದೇ ಜೀವಿಗಳು ಇಲ್ಲಿ ಬದುಕುಳಿದಿಲ್ಲ. ಮನುಷ್ಯರು ಇದರಲ್ಲಿ ಈಜಿದರೆ ಏನಾಗಬಹುದು ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೆ ಈ ಸರೋವರದಲ್ಲಿರುವ ಉಪ್ಪಿನಾಂಶ ಮತ್ತು ಕೆಮಿಕಲ್‌ಗಳಿಂದ ಪ್ರಾಣಿ, ಪಕ್ಷಿಗಳಂತೆ ಮನುಷ್ಯ ಕೂಡ ಬದುಕುಳಿಯುವುದು ಕಷ್ಟ ಎನ್ನಲಾಗುತ್ತಿದೆ.
ಭೇಟಿಗೆ ಉತ್ತಮ ಸಮಯ ಯಾವುದು?
ನೇಟ್ರಾನ್ ಸರೋವರವನ್ನು ನೋಡಲು ಬಯಸುವವರು ಮೇ ಅಂತ್ಯದಿಂದ ನವೆಂಬರ ಆರಂಭದೊಳಗೆ ಅಲ್ಲಿಗೆ ಭೇಟಿ ನೀಡಬಹುದಾಗಿದೆ. ಈ ತಿಂಗಳುಗಳಲ್ಲಿ ಅಲ್ಲಿನ ವಾತಾವರಣ ಸ್ವಲ್ಪ ತಂಪಾಗಿರುತ್ತದೆ. ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಸರೋವರದ ಸುತ್ತಮುತ್ತಲಿನ ಪ್ರದೇಶ ತುಂಬಾ ಬಿಸಿಯಾಗಿರುತ್ತದೆ. ಇನ್ನು ಆಗಸ್ಟ್ ತಿಂಗಳಿನಿಂದ ಫ್ಲೆಮಿಂಗೊ ಪಕ್ಷಿಗಳು ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸುತ್ತವೆ. ಈ ತಿಂಗಳಲ್ಲಿ ಅಲ್ಲಿಗೆ ಭೇಟಿ ನೀಡಿದರೆ ಪಕ್ಷಿ ವೀಕ್ಷಣೆಯನ್ನೂ ಮಾಡಬಹುದು. ಛಾಯಾಗ್ರಾಹಕರನ್ನು ತನ್ನತ್ತ ಸೆಳೆಯುವ ಈ ಸರೋವರ ಪ್ರಾಣಿ, ಪಕ್ಷಿಗಳಿಗೆ ಮೃತ್ಯುಕೂಪವಾಗಿರುವುದು ವಿಪರ್ಯಾಸವೇ ಸರಿ.

