– ಗುರುತಿಗಾಗಿ ಪೊಲೀಸರು ಹುಡುಕಾಟ
ಬೆಂಗಳೂರು: ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳನ್ನು ವೇಲ್‍ನಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.
ಇಂದು ಬೆಳ್ಳಂಬೆಳಗ್ಗೆ ಆನೇಕಲ್ ಸಮೀಪದ ಹೆನ್ನಾಗರ ಗ್ರಾಮ ಪಂಚಾಯತಿಯ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಮೃತ ದೇಹಗಳು ತೇಲುತ್ತಿದ್ದವು. ವಾಯು ವಿಹಾರಕ್ಕೆಂದು ಬಂದಿದ್ದ ಗ್ರಾಮಸ್ಥರು ಮೃತದೇಹವನ್ನು ನೋಡಿ ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ತೆಪ್ಪದ ಮೂಲಕ ಹೊರತೆಗೆದ್ದಾರೆ.
ಮೃತ ತಾಯಿ ಮತ್ತು ಇಬ್ಬರು ಮಕ್ಕಳು ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು, ಮಹಿಳೆಯನ್ನು ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೋಡಿಲ್ಲ. ಹೀಗಾಗಿ ಅವರ ಗುರುತು ಪತ್ತೆಯಾಗುತ್ತಿಲ್ಲ ಎಂದಿದ್ದಾರೆ.
ಜಿಗಿಣಿ ಪೊಲೀಸರು ಸಹ ಮೃತರ ಗುರುತು ಪತ್ತೆಗಾಗಿ ಸ್ಥಳೀಯರನ್ನು ವಿಚಾರಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯಕ್ಕೆ ಮೃತಪಟ್ಟವರು ಯಾರು? ಅವರ ಹಿನ್ನೆಲೆ ಏನು? ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.