ಮಡಿಕೇರಿ: ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಇಬ್ಬರ ಮೃತದೇಹಗಳನ್ನು ಸತತ ಐದು ಗಂಟೆಗಳ ಕಾರ್ಯಚರಣೆ ಮೂಲಕ ಹೊರ ತೆಗೆಯಲಾಗಿದೆ.
ಸೋಮವಾರ ಸಂಜೆ ಕೊಡಗು ಜಿಲ್ಲೆಯ ವಿರಾಜಪೇಟೆ ತೆರಾಲು ಗ್ರಾಮದ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಹಾಗೂ ವಿನೋದ್ ಮೃತ ಕೂಲಿ ಕಾರ್ಮಿಕರು. ಪುಟ್ಟ ಅವರು ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಈ ವೇಳೆ ಸ್ನೇಹಿತ ವಿನೋದ್ ಪುಟ್ಟನನ್ನು ರಕ್ಷಿಸಲು ಹೋಗಿ ಅವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುವುದು ತಡವಾಗಿದ್ದು, ಆಗಲೇ ಕತ್ತಲಾಗಿತ್ತು. ಹೀಗಾಗಿ ಮೃತದೇಹಗಳನ್ನು ತೆಗೆಯಲು ಸಾಧ್ಯವಾಗಿರಲಿಲ್ಲ.
Advertisement
Advertisement
ಮಂಗಳವಾರ ಬೆಳಗ್ಗೆಯಿಂದ ಶ್ರೀಮಂಗಲ ಪೊಲೀಸರು ಸ್ಥಳೀಯ ಮುಳುಗು ತಜ್ಞ ಮಾರಿಮುತ್ತು ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೃತರು ತೆರಾಲು ಗ್ರಾಮದ ಪೊನ್ನಪ್ಪ ಅವರ ತೋಟದ ಕಾರ್ಮಿಕರಾಗಿದ್ದು, ಲೈನ್ ಮನೆಯಲ್ಲಿ ವಾಸವಿದ್ದರು. ಪುಟ್ಟ ತೆರಾಲು ಗ್ರಾಮದವರೇ ಆಗಿದ್ದು, ವಿನೋದ್ ಅಸ್ಸಾಂ ಮೂಲದವರು. ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.