ಆನೇಕಲ್: ಕೆರೆ ಜಾಗವನ್ನ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆಗಳನ್ನ ಶುಕ್ರವಾರ ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮನೆಗಳನ್ನು ತೆರವುಗೊಳಿಸಲಾಯಿತು. ಬೆಂಗಳೂರು ದಕ್ಷಿಣ ತಾಲೂಕು ದೊಡ್ಡನಾಗಮಂಗಲ ಸರ್ವೇ ನಂಬರ್ 54 ರಲ್ಲಿನ ರಾಯಸಂದ್ರ ಕೆರೆಯು ಒಟ್ಟು 56 ಎಕರೆ 20 ಗುಂಟೆ ಜಾಗವಿದ್ದು, ಇದರಲ್ಲಿ 4 ಎಕರೆ 22 ಗುಂಟೆ ಒತ್ತುವರಿ ಮಾಡಿಕೊಳ್ಳಲಾಗಿತ್ತು.
ರಾಮರೆಡ್ಡಿ ಆ್ಯಂಡ್ ಗ್ಯಾಂಗ್ ನಕಲಿ ದಾಖಲೆ ಸೃಷ್ಠಿಸಿ ಬಡಾವಣೆ ಮಾಡಿ ಬಡಜನರಿಗೆ ಸೈಟ್‌ಗಳನ್ನ ಮಾರಾಟ ಮಾಡಿದ್ದು, ನೂರಾರು ಮಂದಿ ಮನೆಗಳನ್ನ ಕಟ್ಟಿಕೊಂಡಿದ್ದರು. ಇದೀಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜೆಸಿಬಿಗಳ ಮೂಲಕ ಕಟ್ಟಡಗಳನ್ನ ನೆಲಸಮ ಮಾಡಲಾಗಿದೆ. ಈ ವೇಳೆ ಜನರು ಆಕ್ರೋಶ ಹೊರಹಾಕಿದ್ದಾರೆ.
ಮನೆಗಳಲ್ಲಿನ ವಸ್ತುಗಳನ್ನ ಹೊರಗೆ ಇಟ್ಟುಕೊಂಡು ನಿವಾಸಿಗಳು ಕಣ್ಣೀರಿಟ್ಟು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೆರೆ ಜಾಗವನ್ನ ಒತ್ತುವರಿ ಮಾಡಿಕೊಳ್ಳುವುದಲ್ಲದೇ ಸೈಟ್‌ಗಳನ್ನ ಮಾರಾಟ ಮಾಡಿರುವ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.