ಲಾಹೋರ್: ಪತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಾ ಕೋಪಗೊಂಡು ಆಕೆಯ ಮೂಗು ಮತ್ತು ಕೂದಲನ್ನು ಕತ್ತರಿಸಿ ಕೌರ್ಯ ಮೆರೆದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.
ಮಂಗಳವಾರದಂದು ಈ ಘಟನೆ ನಡೆದಿದೆ. ಆರೋಪಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಆರೋಪಿ ಎಸ್ಕೆಪ್ ಆಗಿದ್ದಾನೆ. ಇತ್ತ ತೀವ್ರವಾಗಿ ಗಾಯಗೊಂಡ ಸಾಜಿದ್ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯವೆಸೆಗಿ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಬಗ್ಗೆ ದಂಪತಿಯ ಮಗಳು ಪ್ರತಿಕ್ರಿಯಿಸಿ, ನನ್ನ ಅಮ್ಮ ಹಲವು ಸಂಘಗಳಲ್ಲಿ ಸದಸ್ಯರಾಗಿ ಅದರಲ್ಲಿ ಹಣ ಉಳಿಸುತ್ತಿದ್ದರು. ಆದರೆ ಈ ವಿಚಾರಕ್ಕೆ ಅಪ್ಪ ಯಾವಾಗಲೂ ಅಮ್ಮನ ಬಳಿ ಜಗಳ ಮಾಡುತ್ತಿದ್ದರು, ಅಮ್ಮನಿಗೆ ಹೊಡೆಯುತ್ತಿದ್ದರು. ಮಂಗಳವಾರ ಕೂಡ ಅಪ್ಪ-ಅಮ್ಮ ಜಗಳ ಮಾಡುತ್ತಿದ್ದಾಗ, ಸಿಟ್ಟಿನಿಂದ ಅಪ್ಪ ಮೊದಲು ಅಮ್ಮನಿಗೆ ಪೈಪ್‍ನಿಂದ ಹೊಡೆದರು. ಬಳಿಕ ಚಾಕುವಿನಿಂದ ಅಮ್ಮನ ಮೂಗು, ಕೂದಲು ಕತ್ತರಿಸಿದ್ದಾರೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಜಗಳವಾಡುತ್ತಿದ್ದರು. ಪತಿಯ ಕಾಟವನ್ನು ತಾಳಲಾರದೆ ಪತ್ನಿ ಎರಡು ಬಾರಿ ಮನೆಬಿಟ್ಟು ಹೋಗಿದ್ದಳು. ಆದರೆ ಪತಿ ಆಕೆಯ ಮನವೊಲಿಸಿ, ಮುಂದೆ ಹೀಗೆ ಆಗಲ್ಲ ಎಂದು ಮಾತು ಕೊಟ್ಟು ವಾಪಸ್ ಕರೆತಂದಿದ್ದನು ಎಂದು ಕುಟುಂಬದ ಇತರೆ ಸದಸ್ಯರು ವಿಚಾರಣೆ ವೇಳೆ ಹೇಳಿದ್ದಾರೆ.