ಚಿಕ್ಕಮಗಳೂರು: ಹುಟ್ಟುಹಬ್ಬದ ದಿನವೇ ಮಹಿಳಾ ತರಬೇತಿ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮೃತ ತರಬೇತಿ ಪೇದೆಯನ್ನು 26 ವರ್ಷದ ಕವಿತಾ ಎಂದು ಗುರುತಿಸಲಾಗಿದೆ. ಕವಿತಾ ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನವಳಾಗಿದ್ದು, ಬೆಂಗಳೂರಿನಲ್ಲಿ ಪೊಲೀಸ್ ಹುದ್ದೆಗೆ ನೇಮಕವಾಗಿ, ಕಳೆದೊಂದು ತಿಂಗಳಿಂದ ಚಿಕ್ಕಮಗಳೂರಿನ ರಾಮನಹಳ್ಳಿ ತರಬೇತಿ ಕೇಂದ್ರದಲ್ಲಿ ಟ್ರೈನಿಯಾಗಿದ್ದರು.
ಇಂದು ಕವಿತಾಳ ಹುಟ್ಟುಹಬ್ಬವಿತ್ತು. ತರಬೇತಿ ಕೇಂದ್ರದ ಊಟದ ಹಾಲ್‍ನಲ್ಲೇ ಶುಕ್ರವಾರ ರಾತ್ರಿ ಸುಮಾರು 12 ಗಂಟೆವರೆಗೂ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಳು. ಬಳಿಕ ಊಟದ ಹಾಲ್‍ನ ಅಡುಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಕಳೆದೊಂದು ತಿಂಗಳಿನಿಂದ ಚಿಕ್ಕಮಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದ ಕವಿತಾ ಆರೋಗ್ಯದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಕವಿತಾ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಸದ್ಯಕ್ಕೆ ಈ ಕುರಿತು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.