ಲೇಹ್: ಸೋನಮ್ ವಾಂಗ್‌ಚುಕ್ (Sonam Wangchuk) ಜೊತೆ ನಂಟು ಹೊಂದಿರುವ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಲಡಾಖ್ (Ladakh) ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ ರಾಜ್ಯಕ್ಕಾಗಿ ಕಳೆದ ಬುಧವಾರದಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪ ಪಡೆದು ಘರ್ಷಣೆಯಲ್ಲಿ ನಾಲ್ವರು ಪ್ರತಿಭಟನಾಕಾರರು ಸಾವಿಗೀಡಾಗಿದ್ದಾರೆ. ಸಾವಿಗೆ ಕಾರಣವಾದ ಗುಂಪನ್ನು ಪ್ರಚೋದಿಸಿದ ಆರೋಪದ ಮೇಲೆ ನಿನ್ನೆ ಲಡಾಖ್ ರಾಜ್ಯ ಹೋರಾಟಗಾರ ಸೋನಮ್ ವಾಂಗ್‌ಚುಕ್ ಬಂಧಿಸಲಾಗಿದೆ. ವಾಂಗ್‌ಚುಕ್‌ಗೆ ಪಾಕ್ ನಂಟಿನ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಲಡಾಖ್ ಹಿಂಸಾಚಾರಕ್ಕೆ ಪ್ರಚೋದನೆ – ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅರೆಸ್ಟ್
ಲಡಾಖ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಸ್‌ಡಿ ಸಿಂಗ್ ಜಮ್ವಾಲ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ವಾಂಗ್‌ಚುಕ್ ಅವರ ಪಾಕಿಸ್ತಾನ ಭೇಟಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಾಂಗ್‌ಚುಕ್ ಪಾಕಿಸ್ತಾನದಲ್ಲಿ ನಡೆದ ಡಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.
ವಾಂಗ್‌ಚುಕ್ ಬಂಧನಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಗುಪ್ತಚರ ಆಪರೇಟಿವ್ (ಪಿಐಒ) ಬಂಧನದ ಬಗ್ಗೆ ಮತ್ತು ಆ ಕಾರ್ಯಕರ್ತ ಪಾಕಿಸ್ತಾನಿ ಜನರೊಂದಿಗೆ ಸಂಪರ್ಕದಲ್ಲಿರುವುದರ ಬಗ್ಗೆ ಸುಳಿವು ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಾವು ಪಾಕಿಸ್ತಾನದ ಪಿಐಒ ಒಬ್ಬನನ್ನು ಬಂಧಿಸಿದ್ದೇವೆ. ಆತ ವಾಂಗ್‌ಚುಕ್‌ರೊಂದಿಗೆ ಸಂಪರ್ಕದಲ್ಲಿದ್ದ. ಇದರ ದಾಖಲೆ ನಮ್ಮ ಬಳಿ ಇದೆ. ವಾಂಗ್‌ಚುಕ್ ಪಾಕಿಸ್ತಾನದಲ್ಲಿ ನಡೆದ ಡಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರು ಬಾಂಗ್ಲಾದೇಶಕ್ಕೂ ಭೇಟಿ ನೀಡಿದ್ದರು. ಅವರ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ ಎಂದು ಡಿಜಿಪಿ ಜಮ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಲಡಾಖ್ ಹಿಂಸಾಚಾರ – ಸೋನಮ್ ವಾಂಗ್‌ಚುಕ್ NGO ಪರವಾನಗಿ ರದ್ದು
ಸೋನಮ್ ವಾಂಗ್‌ಚುಕ್ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದು ಜಾಮೀನು ಪಡೆಯಲು ಯಾವುದೇ ಅವಕಾಶವಿಲ್ಲದೆ ದೀರ್ಘಾವಧಿಯ ಬಂಧನಕ್ಕೆ ಅವಕಾಶ ನೀಡುತ್ತದೆ. ಅವರನ್ನು ರಾಜಸ್ಥಾನದ ಜೋಧ್‌ಪುರದಲ್ಲಿರುವ ಒಂದು ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೇಹ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

