ಶಿವಮೊಗ್ಗ: ಕಳೆದ 12 ವರ್ಷದ ಹಿಂದೆ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ನಿರ್ಮಾಣವಾಗಿದ್ದ ಶಿವಮೊಗ್ಗದ ಮತ್ಸ್ಯಾಲಯ ಕಾಲ ಕ್ರಮೇಣ ಕಳೆಗುಂದಿದೆ. ಜನಾಕರ್ಷಣೆಯ ಕೇಂದ್ರ ಬಿಂದುವಾಗಬೇಕಿದ್ದ ಮತ್ಸ್ಯ ಸಂಗ್ರಹಾಲಯ ಇಂದು ಜನರಿಲ್ಲದೇ ಬಿಕೋ ಎನ್ನುತ್ತಿದೆ.
ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿರುವ ಮತ್ಸ್ಯಾಲಯವನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 2008ರಲ್ಲಿ ಈ ಮತ್ಸ್ಯಾಲಯ ಸ್ಥಾಪಿಸಲಾಗಿದೆ. ಆದರೆ ಇಂದು ಈ ಮತ್ಸ್ಯಾಲಯ ಜನಾಕರ್ಷಣೆ ಕಳೆದುಕೊಳ್ಳುತ್ತಿದೆ. ಮತ್ಸ್ಯಾಲಯವನ್ನು ಆರಂಭದಲ್ಲಿ ನೋಡಲು ಮಕ್ಕಳು, ಸಾರ್ವಜನಿಕರು ಮುಗಿಬೀಳುತ್ತಿದ್ದರು. ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದರು. ಆದರೆ ಇಂದು ಇದನ್ನು ಕೇಳುವವರೇ ಇಲ್ಲದಂತಾಗಿದೆ. ಈ ಸಂಗ್ರಹಾಲಯ ಇರುವ ಗಾಂಧಿ ಪಾರ್ಕ್ ಕೂಡ, ಜನಾಕರ್ಷಣೆ ಕಳೆದುಕೊಂಡಿದೆ.
Advertisement
Advertisement
ಪ್ರವಾಸೋದ್ಯಮದ ಅಭಿವೃದ್ಧಿ ಆಸೆ ಹೊತ್ತು ನಿರ್ಮಾಣವಾಗಿದ್ದ ಮತ್ಸ್ಯಾಲಯ ಸಮರ್ಪಕವಾದ ನಿರ್ವಹಣೆ ಇಲ್ಲದೆ ಕಳೆಗುಂದಿದೆ. ತರಹೇವಾರಿ ಮೀನುಗಳಿರಬೇಕಾದ ಅಕ್ವೇರಿಯಂಗಳು ಇಂದು ಜಾಳು ಜಾಳಾಗಿದ್ದು, ಇದನ್ನ ನೋಡಲು ಜನರು ಬಾರದೇ ಮತ್ಸ್ಯಾಲಯ ಬಿಕೋ ಎನ್ನುವಂತಾಗಿದೆ.
Advertisement
Advertisement
ವಿವಿಧ ಜಾತಿಯ, ದೇಶ ವಿದೇಶದ ಮೀನುಗಳನ್ನು ಪರಿಚಯಿಸುವಂತಾಗಬೇಕಿದ್ದ ಮತ್ಸ್ಯಾಲಯದಲ್ಲಿ ಕೇವಲ ಸಾಮಾನ್ಯ ತಳಿಯ ಮೀನುಗಳನ್ನು ಇಡಲಾಗಿದೆ. ಮಕ್ಕಳಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡಿ ಮತ್ಸ್ಯಾಲಯ ನಿರ್ಮಿಸಿದ್ದು, ಸದುಪಯೋಗವಾಗದೇ ಇಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಬಂದು ವೀಕ್ಷಿಸುವಂತಾಗಿದೆ. ದೇಶ-ವಿದೇಶದ ಮೀನುಗಳ ಜೊತೆಯಲ್ಲಿ ಸಮುದ್ರದ ತರಹೇವಾರಿ ಮೀನುಗಳನ್ನು ಇಲ್ಲಿ ಸಂಗ್ರಹಿಸಿ ಆಕರ್ಷಣೆ ಜೊತೆಗೆ ಬೋಧನೆಗೂ ಅವಕಾಶ ಮಾಡಿಕೊಡಬೇಕಾಗಿತ್ತು. ಆದರೆ ಇದ್ಯಾವುದು ಇಲ್ಲಿ ಆಗಿಲ್ಲ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಇದೇ ಅಭಿವೃದ್ಧಿ ಅಂತಾರೆ. ತಮ್ಮ ಕಾರ್ಯವೈಖರಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ಕಾರದ ಪ್ರಮುಖ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಇನ್ನಾದರೂ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಮತ್ಸ್ಯಾಲಯ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.