ಚಿತ್ರದುರ್ಗ: ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕರೆ ಸಾಕು ಜಿಲ್ಲೆಯ ಸಮಸ್ಯೆಗಳಿಗೆಲ್ಲಾ ಪರಿಹಾರವಾಗುತ್ತವೆ ಎಂಬ ನಂಬಿಕೆಯಲ್ಲಿ ಎಲ್ಲಾ ಜಿಲ್ಲೆಗಳ ಜನರಿದ್ದಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.
ಹೊರಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ರಂಗು ರಂಗಿನ ಬಣ್ಣದಿಂದ ಮಿಂಚುವ ಸರ್ಕಾರಿ ಆಸ್ಪತ್ರೆಯಲ್ಲಿ ಕುಡಿಯಲು ಶುದ್ಧ ನೀರಿಲ್ಲ, ಮಲಗಲು ಸುಸಜ್ಜಿತ ಬೆಡ್‍ಗಳಿಲ್ಲ. ಹೀಗಾಗಿ ರೋಗಿಗಳು ಪರದಾಡುವಂತಾಗಿದ್ದೂ, ಆರೋಗ್ಯ ಸಚಿವರ ಮಹತ್ವಾಕಾಂಕ್ಷೆ ಯೋಜನೆ ಎನಿಸಿದ್ದ 108 ಅಂಬುಲೆನ್ಸ್‌ಗಳು ಸಹ ಕೆಟ್ಟು ಮೂಲೆ ಸೇರಿದೆ.
Advertisement
Advertisement
ರೋಗಿಗಳ ಪಾಲಿಗೆ ಪ್ರಾಣ ಉಳಿಸುವ ಸಂಜೀವಿನಿಯಾಗಬೇಕಿದ್ದ ಜಿಲ್ಲಾಸ್ಪತ್ರೆಯ ಅಂಬುಲೆನ್ಸ್‌ಗಳು ತುಕ್ಕು ಹಿಡಿದು ಮೂಲೆ ಸೇರಿದೆ. ಹೀಗೆ ಕೆಟ್ಟು ನಿಂತಿರುವ ಅಂಬುಲೆನ್ಸ್‌ಗಳು ಅಕ್ರಮ ಚಟುವಟಿಕೆಯ ತಾಣಗಳಾಗಿವೆ. ಆಸ್ಪತ್ರೆಯಲ್ಲಿ ಹನಿ ನೀರಿಗೂ ರೋಗಿಗಳು ಪರದಾಟ ನಡೆಸುತ್ತಿದ್ದರೂ ಕೇಳುವವರು ಇಲ್ಲದಂತಾಗಿದೆ. ಸುಸಜ್ಜಿತ ಬೆಡ್‍ಗಳಿಲ್ಲದೆ ರೋಗಿಗಳು ಕಷ್ಟಪಡುತ್ತಿದ್ದಾರೆ. ಹರಿದು, ಹಳೆಯದಾದ ಬೆಡ್‍ಗಳ ಮೇಲೆ ಅಧಿಕಾರಿಗಳು ತೇಪೆ ಹಾಕಿದ್ದಾರೆ.
Advertisement
Advertisement
ಅಂಬುಲೆನ್ಸ್‌ಗಾಗಿ ರೋಗಿಗಳ ಪರದಾಡುತ್ತಿದ್ದಾರೆ. ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿರೋದು ಕೇವಲ ಎರಡು ಅಂಬುಲೆನ್ಸ್ ಇದೆ, ಅದು ಕೂಡ ರಿಪೇರಿಗೆ ಅಂತ ಮೂಲೆ ಸೇರಿ ತುಕ್ಕು ಹಿಡಿದಿವೆ. ಇನ್ನು 17 ಸರ್ಕಾರಿ 108 ಅಂಬುಲೆನ್ಸ್‌ಗಳು ಮದ್ಯವ್ಯಸನಿಗಳ ಅಕ್ರಮ ಚಟುವಟಿಕೆ ಕೇಂದ್ರವಾಗಿದೆ. ಈ ನಿರ್ಲಕ್ಷ್ಯದಿಂದ ಸರ್ಕಾರಿ ಅಂಬುಲೆನ್ಸ್‌ಗಳು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಬೇರೆ ದಾರಿಯಿಲ್ಲದೆ ಖಾಸಗಿ ಅಂಬುಲೆನ್ಸ್‌ಗಳ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಖಾಸಗಿ ಅಂಬುಲೆನ್ಸ್‌ಗಳ ದರ್ಬಾರ್ ಜೋರಾಗಿದೆ.
ಈ ಮಧ್ಯೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗು ಖಾಸಗಿ ಅಂಬುಲೆನ್ಸ್ ಮಾಲಿಕರು ಕೈ ಕೈ ಮಿಲಾಯಿಸಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಹೀಗಾಗಿ ಖಾಸಗಿ ಅಂಬುಲೆನ್ಸ್ ಹಾವಳಿಗೆ ಬ್ರೇಕ್ ಹಾಕೋರು ಯಾರು ಇಲ್ಲದಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಈಗಲಾದರೂ ಬಡ ರೋಗಿಗಳ ನೆರವಿಗೆ ಆರೋಗ್ಯ ಸಚಿವ ಶ್ರೀರಾಮುಲು ಬರುತ್ತಾರಾ ಎಂದು ಕಾದು ನೋಡಬೇಕಿದೆ.