ಜೈಪುರ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 9 ಮಂದಿಯ ಗುಂಪು ಕಾರ್ಮಿಕನೊಬ್ಬರನ್ನು ರಾಡ್ ಮತ್ತು ದೊಣ್ಣೆಗಳಿಂದ ಹೊಡೆದು ಅವರ ಕಾಲುಗಳ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದಿರುವ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ.
ಚಂದಾ ಕಾ ತಾಲಾಬ್ ನಿವಾಸಿ ಸುಖಲಾಲ್ ಗುರ್ಜರ್ (40) ಕೊಲೆಗಿಡಾದ ವ್ಯಕ್ತಿ. ಸುಖಲಾಲ್ ಅವರು ಸರ್ಕಾರದ ಗ್ರಾಮೀಣ ಉದ್ಯೋಗ ಯೋಜನೆ (ಎಮ್‍ಜಿಎನ್‍ಆರ್‍ಇಜಿಎ) ಅಡಿಯಲ್ಲಿ ಕಾರ್ಮಿಕರಾಗಿದ್ದರು. ಅರಣ್ಯ ಹುಲ್ಲುಗಾವಲು ಜಾಗವನ್ನು ಆಕ್ರಮಿಸಿಕೊಳ್ಳುವ ಬಗ್ಗೆ ಗುರ್ಜರ್ ಕೆಲವು ಗ್ರಾಮಸ್ಥರೊಂದಿಗೆ ವಿವಾದವನ್ನು ಹೊಂದಿದ್ದರು. ಈ ಹಿನ್ನೆಲೆ ಅವರು ಭಾನುವಾರ ಬೆಳಗ್ಗೆ ತನ್ನ ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ. ಏಳು ತಿಂಗಳ ಹಿಂದೆ ಎರಡು ಕಡೆ ಜಗಳವಾಗಿ ಅವರ ಮೂಳೆ ಮುರಿದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಷಯ ತಿಳಿದ ನಂತರ ಕುಟುಂಬ ಸದಸ್ಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಟಾದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬರುವಾಗಲೇ ಅವರು ಸಾವನ್ನಪ್ಪಿದ್ದಾರೆ.
ಒಂಬತ್ತು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿಗಳನ್ನು ಗುಜರಾಜ್ ಗುರ್ಜರ್ ಮತ್ತು ಭೋಜರಾಜ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಉಳಿದ ಆರೋಪಿಗಳನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.