ದಾವಣಗೆರೆ: ವಿಮೆ ಹಣಕ್ಕಾಗಿ ಹಮಾಲಿಯನ್ನು ಕೊಲೆ ಮಾಡಿ ಈರುಳ್ಳಿ ಮಂಡಿಯ ಮಾಲೀಕನೇ ಸಾವನ್ನಪ್ಪಿದಾನೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಈರುಳ್ಳಿ ಮಾರುಕಟ್ಟೆಯಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿದ್ದ ದಾವಣಗೆರೆಯ ಬಸಾಪುರ ನಿವಾಸಿ ವೀರೇಶ್ ಕೊಲೆಯಾದ ವ್ಯಕ್ತಿ. ಇದೇ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಾಗಿದ್ದ ಹಲಗೇರಿ ಗುರಣ್ಣ ಹಾಗೂ ಅವರ ಮಕ್ಕಳಾದ ಮೃತ್ಯುಂಜಯ, ಬಸವರಾಜ್ ಮೇಲೆ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.
Advertisement
Advertisement
ಏನಿದು ಪ್ರಕರಣ: ಈರುಳ್ಳಿ ಮಂಡಿಯ ಮಾಲೀಕ ಗುರಣ್ಣ ಹಾಗೂ ಆತನ ಮಕ್ಕಳು ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಸಮಸ್ಯೆ ಹೆಚ್ಚಾಗುತ್ತಿದಂತೆ ಸಾಲವನ್ನು ಕಟ್ಟಲು ಮೊದಲನೇ ಮಗ ಮೃತ್ಯುಂಜಯನ ಹೆಸರಿನಲ್ಲಿ ಇದ್ದ ವಿಮೆ ಹಣ ಪಡೆದುಕೊಳ್ಳಲು ಸಂಚು ರೂಪಿಸಿದರು. ಇದರ ಅನ್ವಯ ಏ.25 ರಂದು ಹಲಗೇರಿ ರೋಡ್ ನಲ್ಲಿ ಕಾರು ಅಪಘಾತವಾದಂತೆ ಸೃಷ್ಠಿ ಮಾಡಿ. ಅದರಲ್ಲಿ ವೀರೇಶ್ ಮೃತದೇಹವನ್ನು ಇಟ್ಟು ಮೃತ್ಯುಂಜಯನೇ ಸತ್ತಿದ್ದಾನೆ ಎಂದು ಎಲ್ಲರನ್ನು ನಂಬಿಸಿದ್ದರು.
Advertisement
ಅದೇ ದಿನದಿಂದ ವೀರೇಶ್ ಕೂಡ ನಾಪತ್ತೆಯಾದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ವೀರೇಶ್‍ರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸುದ್ದಿ ತಿಳಿಯುತ್ತಿದಂತೆ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಹಮಾಲಿ ಸಂಘದ ಸದಸ್ಯರು ಈರುಳ್ಳಿ ಮಾರುಕಟ್ಟೆಯಲ್ಲಿ ಅಂಗಡಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
Advertisement
ಘಟನೆ ಕುರಿತು ತನಿಖೆ ನಡೆಸಿರುವ ಮೊಟೇಬೆನ್ನೂರಿನ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಮೃತ ವೀರೇಶ್ ತಮಗೆ ಹಣ ನೀಡಬೇಕಾಗಿತ್ತು. ಹಣ ಕೇಳಿದರೆ ನಮ್ಮ ಮೇಲೆ ತಿರುಗಿ ಬಿದಿದ್ದ. ಈ ಹಂತದಲ್ಲಿ ಜಗಳ ನಡೆದಿದ್ದು, ಆತನಿಗೆ ದೊಣ್ಣೆಯಿಂದ ಥಳಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇತ್ತ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲಾಗಿದ್ದ ಮೃತ್ಯುಂಜಯ ಕೋಲ್ಕತ್ತಾಗೆ ಪರಾರಿಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಆದರೆ ಪುತ್ರನನ್ನು ಕಳೆದುಕೊಂಡ ವೀರೇಶ್ ಕುಟುಂಬಸ್ಥರು ಹಣಕ್ಕಾಗಿ ಅಮಾನುಷವಾಗಿ ಕೊಲೆ ನಡೆದಿದೆ ಎಂದು ಆರೋಪ ಮಾಡಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.