ನವದೆಹಲಿ: ರಾಜ್ಯದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಘೋಷಿಸಬೇಕು ಎಂದು ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ದೇಶದಲ್ಲಿ ಅತಿ ಹೆಚ್ಚು ಒಣ ಭೂಮಿ ಮತ್ತು ಕುಡಿಯುವ ನೀರಿಲ್ಲದೆ ಬಳಲುತ್ತಿರುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮೀಣ ಜಿಲ್ಲೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಕುಡಿಯುವ ನೀರಿಲ್ಲದೆ ತೀವ್ರವಾಗಿ ಹೆಣಗಾಡುತ್ತಿದೆ. ಈ 6 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು “ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ” ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಮಳೆಗಾಲದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಬಳಿ ಪಶ್ಚಿಮ ಹರಿಯುವ ತೊರೆಗಳ ಮೇಲ್ಭಾಗದಿಂದ 24 ಟಿಎಂಸಿ ನೀರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ (NWDA) ಪ್ರಸ್ತಾಪಿಸಿರುವ ನೇತ್ರಾವತಿ-ಹೇಮವತಿ ಲಿಂಕ್‍ಗಳಿಗೆ ಬದಲಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯನ್ನು ಪರಿಗಣಿಸಿ, ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಎಂದರು.
ಕುಡಿಯುವ ನೀರು ದೇಶದಲ್ಲಿ ಮೂಲಭೂತ ಹಕ್ಕಾಗಿರಬೇಕು. ಕರ್ನಾಟಕದಲ್ಲಿ ಅನೇಕ ಜಿಲ್ಲೆಗಳು ತೀವ್ರ ಬರವನ್ನು ಎದುರಿಸುತ್ತಿವೆ. 30 ಜಿಲ್ಲೆಗಳಲ್ಲಿ ಸುಮಾರು 15 ಜಿಲ್ಲೆಗಳು ಕುಡಿಯುವ ನೀರಿಗೆ ಸಂಬಂಧಿಸಿದಂತೆ ತೀವ್ರ ಬರವನ್ನು ಎದುರಿಸುತ್ತಿವೆ. ಈ 6 ಜಿಲ್ಲೆಗಳ ಸಾಮಾನ್ಯ ಜನರ ಹಿತದೃಷ್ಟಿಯಿಂದ ಭಾರತ ಸರ್ಕಾರವು ಈ ರಾಷ್ಟ್ರೀಯ ಯೋಜನೆಯನ್ನು ಶೀಘ್ರವೇ ಘೋಷಿಸಬೇಕು ಮತ್ತು ಯೋಜನೆಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.