ಕಾರವಾರ/ ಉಡುಪಿ/ ಮಂಗಳೂರು: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಕ್ಯಾರ್ ಚಂಡಮಾರುತದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.
ಕಡಲ ತೀರ ಪ್ರದೇಶದಲ್ಲಿ ಬೃಹತ್ ಗಾತ್ರದ ಅಲೆಗಳು ನುಗ್ಗುತ್ತಿದ್ದು, ಕಡಲ ತೀರದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿ ಜನರು ಒಂದೆಡೆ ಪರದಾಡುವಂತಾಗಿದ್ದರೆ, ಇನ್ನೊಂದೆಡೆ ಅಲೆಗಳ ಅಬ್ಬರಕ್ಕೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಉಡುಪಿಯಲ್ಲಿ ಮಳೆಗೆ ಮಹಿಳೆ ಬಲಿಯಾಗಿದ್ದಾರೆ. ಕುಂಜಾರುಗಿರಿ ಶಂಖತೀರ್ಥದಲ್ಲಿ ಸುಲೋಚನಾ(42) ಸಾವನ್ನಪ್ಪಿದ್ದಾರೆ. ಕುರ್ಕಾಲು ಗ್ರಾಮದ ಕುಂಜಾರುಗಿರಿ ಬಳಿ ಈ ಘಟನೆ ನಡೆದಿದ್ದು, ಹುಲ್ಲು ಕೊಯ್ಯಲು ಹೋಗಿದ್ದಾಗ ಆಯ ತಪ್ಪಿ ಮಹಿಳೆ ಹಳ್ಳಕ್ಕೆ ಬಿದ್ದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸಾರ್ವಜನಿಕರ ನೆರವಿನಿಂದ ಮಹಿಳೆಯ ಶವ ಪತ್ತೆಹಚ್ಚಲಾಗಿದೆ.
Advertisement
Advertisement
ಚಂಡಮಾರುತ ಉತ್ತರ ಭಾಗಕ್ಕೆ ಚಲಿಸುತ್ತಿರುವ ಕಾರಣ ಅದರ ದೊಡ್ಡ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಭಾಗಕ್ಕೆ ತಟ್ಟಿಲ್ಲ. ಮಹಾರಾಷ್ಟ್ರ, ಗೋವಾ ಭಾಗದ ಕರಾವಳಿಗೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಕರಾವಳಿ ಮತ್ತು ಮಲೆನಾಡಿನಲ್ಲಿ ವೇಗದಲ್ಲಿ ಗಾಳಿ ಬೀಸಲಿದ್ದು ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
Advertisement
ಕ್ಯಾರ್ ಚಂಡಮಾರುತದ ಕೇಂದ್ರ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ 240 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದ್ದು ಉತ್ತರ ಭಾಗದತ್ತ ಚಲಿಸುತ್ತಾ ಬಳಿಕ ಆಫ್ರಿಕಾ ಖಂಡದ ಒಮಾನ್ ದೇಶದತ್ತ ಚಲಿಸಲಿದೆ ಎಂದು ಹೇಳಿದೆ. ಹೀಗಾಗಿ ಸೈಕ್ಲೋನ್ ಎಫೆಕ್ಟ್ ಕರ್ನಾಟಕದ ಕರಾವಳಿಗೆ ಹೆಚ್ಚು ತಟ್ಟುವ ಸಾಧ್ಯತೆ ಕಡಿಮೆಯೆಂದೇ ಹೇಳಲಾಗುತ್ತಿದೆ. ಹೀಗಿದ್ದರೂ, ಮಂಗಳೂರಿನ ಆಸುಪಾಸಿನಲ್ಲಿ ಸಮುದ್ರ ಅಬ್ಬರಿಸತೊಡಗಿದೆ. ಉಳ್ಳಾಲದ ಸೋಮೇಶ್ವರ, ಮುಕ್ಕಚ್ಚೇರಿ, ಸುರತ್ಕಲ್ ಬಳಿಯಲ್ಲಿ ಕಡಲು ಭೋರ್ಗರೆದಿದ್ದು ತೀರ ನಿವಾಸಿಗಳನ್ನು ಆತಂಕಕ್ಕೆ ಈಡುಮಾಡಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲೆ, ಕಾಲೇಜಿಗೆ ಜಿಲ್ಲಾಧಿಕಾರಿ ರಜೆ ಸಾರಿದ್ದಾರೆ. ಅಲ್ಲದೆ, ಯಾವುದೇ ಕ್ಷಣದಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎನ್ನುವ ಎಚ್ಚರಿಕೆ ನೀಡಿದ್ದ ಕಾರಣ ನೋಡಲ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.
Advertisement
ಕಾರವಾರ ತಾಲೂಕಿನ ಮಾಜಾಳಿ, ದಾಂಡೇಭಾಗ್, ದೇವಭಾಗ್, ಡೋರ್ಲೆಭಾಗ್, ನಚಕಿನಭಾಗ್ ಸೇರಿದಂತೆ ಕಡಲ ತೀರ ಪ್ರದೇಶಕ್ಕೆ ನೀರು ನುಗ್ಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕಡಲ ತೀರದಲ್ಲಿ ನಿಲ್ಲಿಸಿದ ದೋಣಿಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಹಾನಿಯಾಗುತ್ತಿದ್ದು ಅಬ್ಬರ ಹೆಚ್ಚುತ್ತಲೇ ಇದ್ದ ಪರಿಣಾಮ ಜೆಸಿಬಿಗಳ ಮೂಲಕ ಬೋಟ್‍ಗಳನ್ನು ಬೇರೆಡೆ ಇರಿಸುವ ಕಾರ್ಯವನ್ನು ಕಡಲ ಮಕ್ಕಳು ಮಾಡುತ್ತಿದ್ದಾರೆ.
ಕೇವಲ ಕಾರವಾರ ಮಾತ್ರವಲ್ಲದೇ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬಾರ, ಕೇಣಿ, ಗಾಂವಕರ್ ವಾಡ, ಬೇಲೆಕೇರಿ, ಹಾರವಾಡ, ಕುಮಟಾ ತಾಲೂಕಿನ ಗೋಕರ್ಣ, ತದಡಿ, ಕುಡ್ಲೆ ಕಡಲ ತೀರ, ಮುರಡೇಶ್ವರದ ಕಡಲ ತೀರ ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಹುತೇಕ ತೀರ ಪ್ರದೇಶದಲ್ಲಿ ಜನರು ಪರದಾಡುತ್ತಿದ್ದಾರೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಸಹ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಚಂಡಮಾರುತ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿರುವುದರಿಂದ ಕಡಲ ಮಕ್ಕಳು ಆತಂಕ್ಕೆ ಒಳಗಾಗಿದ್ದು, ಈ ವರ್ಷ ಜೂನ್ ತಿಂಗಳಿನಿಂದಲೂ ಹವಾಮಾನ ವೈಪರಿತ್ಯದಿಂದ ಮೀನುಗಾರರು ಸರಿಯಾಗಿ ಮೀನುಗಾರಿಕೆಯೇ ಮಾಡದಂತಾಗಿದೆ.
ವೇಗವಾಗಿ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಹಲವೆಡೆ ಮರಗಳು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಕಾರವಾರ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಇತ್ತ ಕಾಳಿ ನದಿ ನೀರು ಹೆಚ್ಚಾಗಿದ್ದರಿಂದ ಕದ್ರಾ ಜಲಾಶಯದಲ್ಲಿ 31 ಸಾವಿರ ಕ್ಯೂಸೆಕ್ ನೀರು ಜಲಾಶಯದಿಂದ ಹೊರಬಿಡಲಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಇನ್ನೂ ಎರಡು ದಿನಗಳ ಕಾಲ ಕ್ಯಾರ್ ಚಂಡಮಾರುತದ ಎಫೆಕ್ಟ್ ಇರಲಿದೆ ಎನ್ನಲಾಗಿದ್ದು ಜಿಲ್ಲಾಡಳಿತ ಸಹ ಜನರಿಗೆ ಸಮಸ್ಯೆ ಆಗದಂತೆ ಮುಂಜಾಗೃತ ಕ್ರಮ ಕೈಗೊಂಡಿದೆ.