Connect with us

International

ಕುವೈತ್‍ನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ಉದ್ದದ ಸೇತುವೆ!

Published

on

ಕುವೈತ್: ವಿಶ್ವದ ಅತಿ ಉದ್ದದ ಸೇತುವೆಗಳಲ್ಲಿ ಒಂದನ್ನು ಕುವೈತ್‍ನಲ್ಲಿ ಕಟ್ಟಲಾಗುತ್ತಿದ್ದು, ಇದರ ಕಾಮಗಾರಿ ಕೊನೆಯ ಹಂತದಲ್ಲಿದೆ.

ಪುರಾತನ ರೇಷ್ಮೆ ರಸ್ತೆ ಮಾರ್ಗವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶ ಇದಾಗಿದೆ. ಈ ಮೂಲಕ ಕುವೈತ್‍ನ ಉತ್ತರ ಭಾಗದಲ್ಲಿರುವ ಜನವಸತಿ ಇಲ್ಲದ ಸುಬ್ಬಿಯಾ ಪ್ರಾಂತ್ಯದಲ್ಲಿ ಮತ್ತೆ ಜನ ಬದುಕು ಕಟ್ಟಿಕೊಳ್ಳುವಂತೆ ಮಾಡಿ ಸಿಲ್ಕ್ ಸಿಟಿ ಸ್ಥಾಪಿಸುವ ಉದ್ದೇಶದಿಂದ ಈ ಸೇತುವೆ ಕಟ್ಟಲಾಗುತ್ತಿದೆ.

ಕುವೈತ್‍ನಿಂದ ಸುಬ್ಬಿಯಾಗೆ ರಸ್ತೆ ಮಾರ್ಗವಾಗಿ ಹೋಗಲು 90 ನಿಮಿಷ ಬೇಕು. ಆದ್ರೆ 22 ಮೈಲಿ(35 ಕಿ.ಮೀ) ಉದ್ದವಾದ ಈ ಸೇತುವೆ ಈ ಸಮಯವನ್ನು 20 ರಿಂದ 25 ನಿಮಿಷಕ್ಕೆ ಇಳಿಸಲಿದೆ. ಸುಬ್ಬಿಯಾದಲ್ಲಿ ಈಗಾಗಲೇ 5 ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಾವರವನ್ನು ಕಟ್ಟಲಾಗಿದೆ.

904 ಮಿಲಿಯನ್ ದಿನಾರ್ (ಅಂದಾಜು 20 ಸಾವಿರ ಕೋಟಿ ರೂ.) ವೆಚ್ಚದಲ್ಲಿ ಈ ಸೇತುವೆಯನ್ನು ಕಟ್ಟಲಾಗುತ್ತಿದೆ. 2006ರ ಜನವರಿಯಲ್ಲಿ ನಿಧನ ಹೊಂದಿದ ಇಲ್ಲಿನ ಎಮಿರ್(ಮುಸ್ಲಿಂ ಆಡಳಿತಗಾರ) ಶೇಕ್ ಜಬೀರ್ ಅಲ್ ಅಹ್ಮದ್ ಅಲ್ ಸಬಹ್ ಅವರ ಹೆಸರನ್ನು ಈ ಸೇತುವೆಗೆ ಇಡಲಾಗಿದೆ.

ಕುವೈತ್‍ನಿಂದ ಸುಬ್ಬಿಯಾವರೆಗೆ ಕಟ್ಟಲಾಗುತ್ತಿರುವ ಈ ಸೇತುವೆ ಮುಖ್ಯ ಸೇತುವೆಯಾಗಿದ್ದು ಇದರೊಂದಿಗೆ 7.7 ಮೈಲಿ ಉದ್ದದ ದೋಹಾ ಲಿಂಕ್ ಸೇತುವೆಯನ್ನು ಕೂಡ ಪಶ್ಚಿಮದ ಕಡೆಗೆ ಕಟ್ಟಲಾಗುತ್ತಿದೆ. ಎರಡೂ ಸೇತುವೆಗಳು ದೇಶದ ಪ್ರಮುಖ ವಾಣಿಜ್ಯ ಬಂದರು ಶುವೇಕ್ ಪೋರ್ಟ್‍ನಿಂದ ಆರಂಭವಾಗಲಿವೆ. ಸುಬ್ಬಿಯಾ ಸೇತುವೆಯೊಂದನ್ನೇ ಪರಿಗಣಿಸಿದ್ರೆ ಇದು ವಿಶ್ವದ 4ನೇ ಅತೀ ಉದ್ದದ ಸೇತುವೆ ಎಂದು ಇಲ್ಲಿನ ಅಧಿಕಾರಿ ಅಹ್ಮದ್ ಅಲ್ ಹಸನ್ ಹೇಳಿದ್ದಾರೆ. ಅಮೆರಿಕದಲ್ಲಿರುವ 38.44 ಕಿಮೀ ಉದ್ದದ ಲೇಕ್ ಪೋಂಟ್‍ಚಾಟ್ರ್ರಿಯನ್ ಸೇತುವೆ ನೀರಿನ ಮೇಲೆ ಕಟ್ಟಲಾಗಿರುವ ವಿಶ್ವದ ಅತೀ ಉದ್ದದ ಸೇತುವೆಯಾಗಿದೆ.

ಕುವೈತ್‍ನಲ್ಲಿ ಕಟ್ಟಲಾಗುತ್ತಿರುವ ಸೇತುವೆಯ ಕಾಮಗಾರಿ ಮುಂದಿನ ವರ್ಷ ನವೆಂಬರ್ ವೇಳೆಗೆ ಮುಕ್ತಾಯವಾಗಲಿದೆ ಅಂತ ಯೋಜನಾಧಿಕಾರಿ ಮೈ ಅಲ್ ಮೆಸ್ಸಾದ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *