– ಕೇಂದ್ರ, ರಾಜ್ಯ ಸರ್ಕಾರಗಳಿಂದ ಅಗತ್ಯ ನೆರವು ಕೊಡಿಸಲು ಸಿದ್ಧ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಜಾಗತಿಕ ಮಟ್ಟದ ಸ್ಥಾನಮಾನ ಹೊಂದಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಗತ್ಯ ನೆರವು, ಸಹಕಾರ ಕೊಡಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಮಟ್ಟದ ಖೋ-ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ವಿವಿಗಳ 50 ಅಧಿಕಾರಿಗಳೊಂದಿಗೆ 16 ತಂಡಗಳ 200ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಖೋ-ಖೋ ಸರಳ, ಬೌದ್ಧಿಕ ಕೌಶಲ್ಯ ಹೆಚ್ಚಿಸುವ ಹಾಗೂ ಮನರಂಜನೆಯ ಆಟವಾಗಿದೆ. ಯಾವುದೇ ಕ್ರೀಡೆ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕವಾಗಿದೆ. ಯುವ ಸಮೂಹದ ಸದ್ಬಳಕೆಯಾಗಬೇಕಾದರೆ ಸದೃಢ ಮನಸ್ಸುಗಳು ತಯಾರಾಗಬೇಕು. ಆರೋಗ್ಯಕರ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಕಾಣಲು ಸಾಧ್ಯ ಕಿವಿ ಮಾತು ಹೇಳಿದರು.
Advertisement
Advertisement
ಅತಿಹೆಚ್ಚು ಯುವಶಕ್ತಿ ಹೊಂದಿದ ರಾಷ್ಟ್ರ ನಮ್ಮದು, ಈ ದೇಶದ ಭವಿಷ್ಯ ಯುವಜನತೆಯನ್ನು ಅವಲಂಬಿಸಿದೆ. ದೇಶದ ಹಲವು ಪ್ರತಿಷ್ಠಿತ ವಿವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಗುರುತಿಸಿಕೊಂಡಿರುವುದು ಹರ್ಷದ ಸಂಗತಿಯಾಗಿದೆ. ವಿವಿ ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಹೀಗಾಗಿ ದಶಕಗಳ ನಂತರ ದಕ್ಷಿಣ ವಲಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
Advertisement
ವಿದ್ಯಾರ್ಥಿಗಳು ಕೇವಲ ಪ್ರಮಾಣ ಪತ್ರಕ್ಕಾಗಿ ಓದದೇ ಭವಿಷ್ಯದ ಭವ್ಯ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅಗತ್ಯವಿದೆ. ದೇಶದ ಪ್ರಧಾನಿ ಮೋದಿಯವರ ಫಿಟ್ ಇಂಡಿಯಾ ಕಲ್ಪನೆ ವ್ಯಕ್ತಿ ಹಾಗೂ ದೇಶದ ವಿಕಾಸಕ್ಕೆ ಹೊಸ ಭಾಷ್ಯ ಬರೆದಂತಾಗಿದೆ ಎಂದರು.
Advertisement
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ, ಕುಲಸಚಿವ ಡಾ.ಎಸ್.ಎಸ್.ಪಾಟೀಲ್, ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ಶೋಭಾ ನಾರಾಯಣ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ, ವೆಂಕಟೇಶ್ವರಲು, ಎಸ್.ಎಂ.ಪ್ರಕಾಶ್, ಜ್ಯೋತಿ ಪ್ರಕಾಶ್, ಎನ್.ಡಿ.ವಿರೂಪಾಕ್ಷ, ಪ್ರೊ.ರಮೇಶ್, ಕಾಂತರಾಜು ಇದ್ದರು.