ಕೊಡಗು: ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಜನರು ಹೊಸದಾಗಿ ಪಡಿತರ ಚೀಟಿ ನೀಡುವ ವಿಚಾರದಲ್ಲಿಯೂ ಅಧಿಕಾರಿಗಳು ಲಂಚ ಪಡೆಯುತ್ತಿರುವ ಶೋಚನೀಯ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.
ಮಹಾಮಳೆಗೆ ಕೊಡಗಿನ ಜನ ತತ್ತರಿಸಿ ಹೋಗಿದ್ದು, ಅನೇಕರು ತಮ್ಮ ವಾಸಸ್ಥಳಗಳನ್ನು ಕಳೆದುಕೊಂಡು ನಿರಾಶ್ರಿತ ಕೇಂದ್ರಗಳನ್ನು ತಲುಪಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ನಾಡಿನ ಜನ ಸಹಾಯಹಸ್ತವನ್ನೇ ಚಾಚಿದ್ದರು. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಮತ್ತೊಮ್ಮೆ ಜೀವನ ಕಟ್ಟಿಕೊಳ್ಳಲು ಮುಂದಾಗಿರುವ ಜನತೆಗೆ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ.
ಪ್ರವಾಹದಿಂದ ಎಲ್ಲಾ ದಾಖಲೆಗಳನ್ನು ಕಳೆದುಕೊಂಡಿರುವ ಜನ ಹೊಸದಾಗಿ ಪಡಿತರ ಚೀಟಿಯನ್ನು ಪಡೆಯಲು ಮುಂದಾದಾಗ ಅಧಿಕಾರಿಗಳು ಲಂಚ ಕೇಳಿ ತಮ್ಮ ಲಂಚಬಾಕತವನ್ನು ಮೆರೆದಿದ್ದಾರೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಹೊಸದಾಗಿ ಪಡಿತರ ಚೀಟಿ ನೀಡುವ ವಿಚಾರದಲ್ಲಿ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಅಧಿಕಾರಿ ರಾಜಣ್ಣ ಹಾಗೂ ಕಂಪ್ಯೂಟರ್ ಆಪರೇಟರ್ ಮದ್ದು ಎಂಬಾತ ಪ್ರತಿ ಪಡಿತರ ಚೀಟಿ 500 ರೂಪಾಯಿ ಲಂಚ ಪಡೆಯುವ ಮೂಲಕ ವಸೂಲಿ ದಂಧೆಗೆ ಇಳಿದಿದ್ದಾರೆ.
ಸೂರು ಕಳೆದುಕೊಂಡ ಸಂತ್ರಸ್ತರ ಬಳಿ ಹಣವನ್ನು ಪೀಕುತ್ತಿರುವ ದೃಶ್ಯವನ್ನು ಸ್ಥಳೀಯರಾದ ಸಂತೋಷ್ ಎಂಬವರು ಸೆರೆ ಹಿಡಿದಿದ್ದಾರೆ. ಅಲ್ಲದೇ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೂ, ಆ ಅಧಿಕಾರಿಗಳು ತಮ್ಮ ಪಾಡಿಗೆ ತಾವು ಹಣ ವಸೂಲಿಗೆ ಮುಂದಾಗಿದ್ದಾರೆ. ಇದರಿಂದ ಬೇಸತ್ತ ಸಂತೋಷ್ ಹಾಗೂ ಸಂತ್ರಸ್ತರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=TNRm6px6mtw