ಬೆಂಗಳೂರು: ಕನ್ನಡದ ಚಿತ್ರರಂಗದಲ್ಲೇ ನಿರ್ಮಿಸಲು ಹೊರಟಿರುವ ಬಹು ನಿರೀಕ್ಷಿತ ಪೌರಾಣಿಕ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಇದೇ ತಿಂಗಳ 9ರಂದು ಬಿಡುಗಡೆಗೆ ಸಿದ್ಧವಾಗಿದೆ.
ಮುನಿರತ್ನ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಕುರುಕ್ಷೇತ್ರ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಯೋಧನನಾಗಿ, ನಿಖಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದಾರೆ. ಬಹುನಿರೀಕ್ಷೆ ಹುಟ್ಟಿಸಿರುವ ಚಿತ್ರದ ಸ್ಪೆಷಲ್ ಪ್ರೀಮಿಯರ್ ಶೋವನ್ನು ಸೋಮವಾರ ರಾತ್ರಿ ರಾಕ್‍ಲೈನ್ ಸಿನಿಮಾದಲ್ಲಿ ನಿರ್ಮಾಪಕರು ಆಯೋಜಿಸಿದರು.
ಅಭಿಮನ್ಯು ಪಾತ್ರದಲ್ಲಿ ನಟಿಸಿರುವ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕರಾದ ಮುನಿರತ್ನ, ರಾಕ್‍ಲೈನ್ ವೆಂಕಟೇಶ್ ಹಾಗೂ ಸಾಧು ಕೋಕಿಲಾ ಅವರು ಸಿನಿಮಾವನ್ನು ವೀಕ್ಷಿಸಿದರು. ಕನ್ನಡದಲ್ಲಿ ಮೂಡಿ ಬಂದಿರುವ ಅತ್ಯುತ್ತಮ ಸಿನಿಮಾ ಇದಾಗಿದ್ದು, ನಾನು ಈಗಾಗಲೇ 50ಕ್ಕೂ ಹೆಚ್ಚು ಬಾರಿ ಸಿನಿಮಾ ನೋಡಿದ್ದೇನೆ. ಪ್ರತಿಯೊಬ್ಬ ಕಲಾವಿದರು ಉತ್ತಮವಾಗಿ ಅಭಿನಯ ಮಾಡಿದ್ದಾರೆ. ಬಹು ತಾರಾಗಣ ಇರುವ ಚಿತ್ರವಾಗಿದ್ದು, ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಳ್ಳಿಪರದೆಗೆ ಬರಲಿದೆ ಎಂದು ನಿರ್ಮಾಪಕ ಮುನಿರತ್ನ ಹೇಳಿದರು.
ಸಿನಿಮಾ ನೋಡಿದ ನಿಖಿಲ್ ಕುಮಾರಸ್ವಾಮಿ ಇಂತಹ ಚಿತ್ರದಲ್ಲಿ ನಾನು ನಟಿಸಿದ್ದು ನಾನು ಎಷ್ಟೇ ಸಿನಿಮಾ ಮಾಡಿದರೂ ಈ ಸಿನಿಮಾ ಮಾತ್ರ ಮೊದಲ ಸಾಲಿನಲ್ಲಿರುತ್ತೆ. ಅಂತಹ ಸಿನಿಮಾ ಇದು. ಇದರಲ್ಲಿ ನನಗೆ ಅವಕಾಶ ಕೊಟ್ಟ ಮುನಿರತ್ನ ಅವರಿಗೆ ಧನ್ಯವಾದ ಹೇಳುತ್ತೇನೆ. ಈ ಚಿತ್ರದಲ್ಲಿ ದರ್ಶನ್, ಅರ್ಜುನ್ ಸಾರ್ಜಾ, ಅಂಬರೀಶ್, ರವಿಚಂದ್ರನ್, ರವಿಶಂಕರ್, ಹೀಗೆ ಅನೇಕ ಕಲಾವಿದರು ನಟಿಸಿದ್ದಾರೆ ಎಂದರು.
ಅಲ್ಲದೆ ಇಂದು ತ್ರಿಡಿಯಲ್ಲಿ ಸಿನಿಮಾ ನೋಡ್ದೆ, ಮತ್ತೆ ಎಲ್ಲಾ ಕಲಾವಿದರೊಂದಿಗೆ ಟೂಡಿಯಲ್ಲಿ ಸಿನಿಮಾ ನೋಡುತ್ತೇನೆ. ಎಲ್ಲರೂ ತಪ್ಪದೇ ಚಿತ್ರಮಂದಿರದಲ್ಲೇ ಕುರುಕ್ಷೇತ್ರ ಸಿನಿಮಾವನ್ನು ನೋಡಿ ಎಂದು ನಿಖಿಲ್ ಕುಮಾರಸ್ವಾಮಿ ಸಿನಿಮಾ ನೋಡಿದ ಸಂತೋಷವನ್ನ ಹಂಚಿಕೊಂಡರು.