Bengaluru CityCinemaDistrictsKarnatakaLatest

ಕುರುಕ್ಷೇತ್ರ: ದುರ್ಯೋಧನನ ಜೊತೆ ಮಿಂಚುತ್ತಿರೋ ಭೀಷ್ಮ!

ಬೆಂಗಳೂರು: ಕುರುಕ್ಷೇತ್ರ ಬಿಡುಗಡೆಯಾಗಲು ದಿನಗಣನೆ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ವಿಜೃಂಭಿಸಿರೋ ಈ ಸಿನಿಮಾ ಅವರ ಅಭಿಮಾನಿಗಳಿಗೂ ಸ್ಪೆಷಲ್. ಇನ್ನೇನು ತೆರೆಯ ಮೇಲೆ ಕುರುಕ್ಷೇತ್ರ ಮೂಡಿಕೊಳ್ಳೋ ಕ್ಷಣಗಳು ಹತ್ತಿರಾಗುತ್ತಲೇ ಥೇಟರ್‌ಗಳ ಮುಂದೆ ಕಟೌಟ್ ಭರಾಟೆಯೂ ಜೋರಾಗಿದೆ. ಹೇಳಿಕೇಳಿ ಇದು ದೊಡ್ಡ ಕ್ಯಾನ್ವಾಸಿನ ಚಿತ್ರ. ಇದರಲ್ಲಿ ಹಲವಾರು ಸ್ಟಾರ್ ನಟ ನಟಿಯರೂ ನಟಿಸಿದ್ದಾರೆ. ಒಂದು ವೇಳೆ ಅವರೆಲ್ಲರ ಕಟೌಟ್ ಹಾಕಿದರೆ ಆಯಾ ಥೇಟರ್ ಇರೋ ಏರಿಯಾವೆಲ್ಲ ಕಟೌಟ್ ಮಯವಾಗಿ ಬಿಡುತ್ತದೆ. ಯಾಕೆಂದರೆ ಅಷ್ಟು ದೊಡ್ಡ ತಾರಾಗಣ ಕುರುಕ್ಷೇತ್ರದಲ್ಲಿದೆ!

ಹೀಗಿರೋದರಿಂದಲೇ ಇದೀಗ ಥೇಟರ್‌ಗಳ ಮುಂದೆ ಪ್ರಧಾನವಾಗಿ ಇಬ್ಬರ ಕಟೌಟುಗಳು ರಾರಾಜಿಸುತ್ತಿವೆ. ದುರ್ಯೋಧನನಾಗಿ ನಟಿಸಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಭೀಷ್ಮ ಅಂಬರೀಶ್ ಅವರ ಕಟೌಟ್ ಬಹುತೇಕ ಚಿತ್ರಮಂದಿರಗಳ ಮುಂದೆ ಜನರನ್ನು ಸೆಳೆಯುತ್ತಿವೆ. ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ಅನೇಕ ಹೀರೋಗಳು ಈ ಚಿತ್ರದಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ದರ್ಶನ್ ಮತ್ತು ಅಂಬರೀಶ್ ಅವರ ಕಟೌಟುಗಳನ್ನು ಚಿತ್ರಮಂದಿರಗಳ ಮುಂದೆ ನಿಲ್ಲಿಸಲಾಗುತ್ತಿದೆ.

ಹಾಗಂತ ಇದರ ಹಿಂದೆ ಯಾವ ಉದ್ದೇಶಗಳೂ ಇಲ್ಲ. ಈ ಬಗ್ಗೆ ಕುರುಕ್ಷೇತ್ರದಲ್ಲಿ ನಟಿಸಿರೋ ಸಕಲ ಕಲಾವಿದರಿಗೂ ಸಹಮತವಿದೆ. ಅಷ್ಟಕ್ಕೂ ಈ ಹಿಂದೆ ಖುದ್ದು ದರ್ಶನ್ ಅವರೇ ಯಾರ ಕಟೌಟುಗಳನ್ನು ನಿಲ್ಲಿಸೋದೂ ಬೇಡ, ಅಂಬರೀಶ್ ಅವರ ಕಟೌಟ್ ಒಂದಿದ್ದರೆ ಸಾಕು ಎಂದಿದ್ದರು. ಆದರೂ ಇದು ದರ್ಶನ್ ಅವರ ಐವತ್ತನೇ ಚಿತ್ರ. ಇನ್ನು ಅಂಬರೀಶ್ ಅವರನ್ನು ಅಪ್ಪಾಜಿ ಎಂದೇ ಕರೆಯುತ್ತಾ ಅವರ ಬಗ್ಗೆ ವಿಶೇಷವಾದ ಅಕ್ಕರಾಸ್ಥೆ ಹೊಂದಿರುವವರು ದರ್ಶನ್. ಈ ಕಾರಣದಿಂದಲೇ ಭೀಷ್ಮನ ಜೊತೆ ದುರ್ಯೋಧನನ ಕಟೌಟುಗಳನ್ನೂ ಹಾಕಲಾಗುತ್ತಿದೆ.

ಚಿತ್ರಮಂದಿರಗಳ ಎದುರು ಹೀಗೆ ಭೀಷ್ಮ ಮತ್ತು ದುರ್ಯೋಧನನ ಕಟೌಟುಗಳು ರಾರಾಜಿಸುತ್ತಿರೋದನ್ನು ಕಂಡು ಅಭಿಮಾನಿಗಳು ಮಾತ್ರವಲ್ಲದೇ ಜನರೆಲ್ಲ ಖುಷಿಗೊಳ್ಳುತ್ತಿದ್ದಾರೆ. ಕುರುಕ್ಷೇತ್ರ ಬಿಡುಗಡೆಯಾಗಲು ಎರಡು ದಿನ ಬಾಕಿ ಇರುವಾಗಲೇ ರಾಜ್ಯಾದ್ಯಂತ ಇಂಥಾ ಕಟೌಟ್ ನಿರ್ಮಿಸೋ ಕಾರ್ಯ ಭರದಿಂದ ಸಾಗುತ್ತಿದೆ. ಪ್ರೇಕ್ಷಕರಂತೂ ತಮ್ಮಿಷ್ಟದ ನಟರನ್ನು ಒಂದೇ ತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ.

YouTube video

Leave a Reply

Your email address will not be published. Required fields are marked *

Back to top button