– ರೆಡ್‌ಹ್ಯಾಂಡ್ ಆಗಿ ಹಿಡಿದ ಜೆಡಿಎಸ್ ಎಜೆಂಟ್
ತುಮಕೂರು: ಕುಣಿಗಲ್ (Kunigal) ತಾಲೂಕಿನ ಸಂತೇಮಾವತ್ತೂರು ವಿಎಸ್‌ಎಸ್‌ಎನ್ ಚುನಾವಣೆಯ (Election) ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಚುನಾವಣಾಧಿಕಾರಿಯೇ ಕಾಂಗ್ರೆಸ್ (Congress) ಬೆಂಬಲಿತ ಅಭ್ಯರ್ಥಿ ಪರ ಬ್ಯಾಲೆಟ್ ಪೇಪರ್‌ನಲ್ಲಿ ಹೆಚ್ಚುವರಿಯಾಗಿ ಮತಹಾಕಿ ಅಕ್ರಮ ನಡೆಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ (JDS) ಎಜೆಂಟ್ ಈ ಅಕ್ರಮವನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಚುನಾವಣಾಧಿಕಾರಿ ಸುನೀಲ್ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಎನ್‌ಡಿಎ ಕಾರ್ಯಕರ್ತರು, ಮುಖಂಡರು ಧರಣಿ ನಡೆಸಿ ಭಾರಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ಇದನ್ನೂ ಓದಿ: ಉಪಚುನಾವಣೆ ಹೊತ್ತಲ್ಲೇ ಬಾಗಲಕೋಟೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ
ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಸಂತೇಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಬಾಲ ನಾಯ್ಕ್ ಚುನಾವಣಾ ಏಜೆಂಟ್ ಆದರೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಶಿವಕುಮಾರ್ ಏಜೆಂಟ್ ಆಗಿದ್ದರು.
ಬೆಳಗ್ಗೆ ಮತದಾನ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಮದ್ಯಾಹ್ನ ಆಗುತ್ತಿದಂತೆ ಆಕ್ರಮ ಮತದಾನ ಆಗುತ್ತಿದೆ ಎಂದು ಎನ್‌ಡಿಎ ಕಾರ್ಯಕರ್ತರು ಆರೋಪಿಸಿ ವಿರೋಧಿಸಿದರು.
ಮದ್ಯಾಹ್ನ ವೇಳೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶಿವಕುಮಾರ್ ಹಾಗೂ ಕೃಷ್ಣ ಅವರು ಸುಮಾರು 100 ರಿಂದ 150ಕ್ಕೂ ಅಧಿಕ ನಕಲಿ ಮತಪತ್ರಗಳನ್ನು ಹಿಡಿದು ಮತಪೆಟ್ಟಿಗೆಯಲ್ಲಿ ಹಾಕಲು ಮುಂದಾದರು. ತಕ್ಷಣ ಎನ್‌ಡಿಎ ಪಕ್ಷದ ಎಜೆಂಟ್ ಬಾಲ ನಾಯ್ಕ್ ಮೊದಲಾದವರು ನಕಲಿ ಮತದಾನ ಆಗುತ್ತಿದೆ ಹಿಡಿದುಕೊಳ್ಳಿ ಎಂದು ಕೂಗಿ ಕೊಂಡರು. ಎಚ್ಚೆತ್ತುಕೊಂಡ ಶಿವಕುಮಾರ್ ಮತ್ತಿತರರು ಮತಗಳನ್ನು ಎಸೆದು ಓಡಿಹೋದರು. ಈ ಅಕ್ರಮ ಮತದಾನಕ್ಕೆ ಚುನಾವಣಾಧಿಕಾರಿಯೇ ಕಾರಣ ಎಂದು ಎನ್‌ಡಿಎ ಕಾರ್ಯಕರ್ತರು ಚುನಾವಣಾಧಿಕಾರಿ ಸುನೀಲ್ ವಿರುದ್ಧ ಧಿಕ್ಕಾರ ಕೂಗಿದರು. ಈ ನಡುವೆ ಗದ್ದಲ ಉಂಟಾಗಿ ಪೊಲೀಸರು ಮಧ್ಯ ಪ್ರವೇಶಿಸಿದರು.
ಪೊಲೀಸರು ಕಾರ್ಯಕರ್ತರ ನಡುವೆ ತಳ್ಳಾಟ: ಅಕ್ರಮ ಚುನಾವಣೆ ನಡೆಯುತ್ತಿದೆ ಎಂದು ಆರೋಪಿಸಿ ಎನ್‌ಡಿಎ ಕಾರ್ಯಕರ್ತರು ಮತಗಟ್ಟೆಗೆ ನುಗ್ಗಲು ಯತ್ನಿಸಿದರು. ಅವರನ್ನು ತಡೆಯಲು ಪೊಲೀಸರು ಯತ್ನಿಸಿದ್ದಾಗ ಪೊಲೀಸರ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟವಾಯಿತು. ವಿಷಯ ತಿಳಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಣ್ಣ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎಸ್.ಬಲರಾಮ್, ಪುರಸಭಾ ಮಾಜಿ ಸದಸ್ಯ ಆನಂದ್‌ಕುಮಾರ್ ಮೊದಲಾದವರು ಘಟನಾ ಸ್ಥಳಕ್ಕೆ ಬಂದರು. ಬಳಿಕ ಅಪಾರ ಸಂಖ್ಯೆಯಲ್ಲಿ ಸೇರಿದ ಎನ್‌ಡಿಎ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಚುನಾವಣಾಧಿಕಾರಿ ವಿರುದ್ದ ಧಿಕ್ಕಾರ ಕೂಗಿದರು, ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿದರು. ಇದನ್ನೂ ಓದಿ: ದಾವಣಗೆರೆ | ಯಾರಿಗೆ ಟಿಕೆಟ್ ಕೊಟ್ಟರೂ ಬಿಜೆಪಿ ಗೆಲ್ಲಿಸ್ತೇವೆ – ಐವರು ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟು ಪ್ರದರ್ಶನ

