ಉಡುಪಿ: ವಿಚಿತ್ರ ಹಾಡುಗಾರ, ಫುಲ್ ಡಿಫರೆಂಟ್ ಮ್ಯಾನರೀಸಂನಿಂದ ಲಕ್ಷಾಂತರ ಮಂದಿಯ ಫೇವರೇಟ್ ಆಗಿದ್ದನು. ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚುತ್ತಿದ್ದ ಕುಂದಾಪುರದ ರಾಕ್ ಸ್ಟಾರ್ ವೈಕುಂಠ ಮೃತಪಟ್ಟಿದ್ದಾನೆ. ವಿಪರೀತ ಕುಡಿತಕ್ಕೆ ಕುಂದಾಪುರದ ರಾಕ್ ಸ್ಟಾರ್ ಬಲಿಯಾಗಿದ್ದಾನೆ.
ತಾಳ ಮೇಳ ಇಲ್ಲದೆ ಹಾಡಿದ್ರೂ ಈತ ಫೇಮಸ್. ಸಾಹಿತ್ಯ ಅದೇನೇ ಇರಲಿ ಈತನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಷ್ಟೇ ಸ್ಪೀಡಲ್ಲಿ ಓಡುತ್ತದೆ. ಉಡುಪಿ ಜಿಲ್ಲೆ ಕುಂದಾಪುರ ನಿವಾಸಿ ವೈಕುಂಠ, ಕಳೆದ ನಾಲ್ಕೈದು ವರ್ಷಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದನು. ಹಾಡು, ಮ್ಯೂಸಿಕ್ ಮೂಲಕ ಹಾಡು ಕಟ್ಟಿ ಜನರನ್ನು ರಂಜಿಸುತ್ತಿದ್ದನು. ಜನ ಆತನ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದರು. ಅದು ವೈರಲ್ಲಾಗಿ ವೈಕುಂಠ ಅವರಿಗೆ ರಾಕ್ ಸ್ಟಾರ್ ಎಂಬ ಬಿರುದು ಕೂಡ ಸಿಕ್ಕಿತ್ತು.
ಶರಾಬಿನ ಆಸೆ ತೋರಿಸಿಯೂ ಜನ ಹಾಡಿಸುತ್ತಿದ್ದರು. ಎರಡು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ವೈಕುಂಠ, ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾರ್ವಜನಿಕರು ವೈಕುಂಠನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಗೆಳೆಯರು ದೂರಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಿಲ್ಲ, ವೈದ್ಯರು ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ವೈಕುಂಠ ಗೆಳೆಯ ಪ್ರಸಾದ್ ಬೈಂದೂರು ದೂರಿದ್ದಾರೆ.
ವಿಪರೀತ ಕುಡಿತ ವೈಕುಂಠನ ಲಿವರನ್ನು ಘಾಸಿಗೊಳಿಸಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದವ ವೈದ್ಯರ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಕೃತಕ ಉಸಿರಾಟ ಕೊಟ್ಟರೂ ರಾಕ್ ಸ್ಟಾರ್ ನನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ನಾಗೇಶ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವೈಕುಂಠನನ್ನು ಜನ ಮೋಜಿಗಾಗಿ ಕಾಲಹರಣಕ್ಕಾಗಿ ಉಪಯೋಗಿಸಿಕೊಂಡಿದ್ದರು. ಶರಾಬು ತೆಗಿಸಿಕೊಟ್ಟು ಮುಗ್ಧ ಯುವಕನನ್ನು ಜನ ಬೀದಿಗೆ ತಂದಿದ್ದರು. ಟ್ರೋಲ್ ಗಾಗಿ, ಟೈಂ ಪಾಸ್ ಗಾಗಿ ಉಪಯೋಗವಾದ ವೈಕುಂಠ ಇಂದು ಬಾರದಲೋಕಕ್ಕೆ ಹೋಗಿದ್ದು, ಸ್ಥಳೀಯರಲ್ಲಿ ಅತೀವ ದುಃಖವುಂಟು ಮಾಡಿದೆ.