ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ಉಡುಪಿಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯಾವನೋ ಶ್ರೀನಿವಾಸ ಶೆಟ್ಟಿ, ಅವನ ಮುಖನೇ ನೋಡಿಲ್ಲ ಅಂತ ಸಿದ್ದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ಮತ್ತು ಬೈಂದೂರು ಜನ ಸಿದ್ದರಾಮಯ್ಯ ಭಾಷಣವನ್ನು ವೈರಲ್ ಮಾಡಿ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇದರ ಜೊತೆಯಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಹಾಲಾಡಿ ಜೊತೆಗಿರುವ ಫೋಟೋಗಳನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಉಡುಪಿಯಲ್ಲಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಏಕವಚನದಲ್ಲಿ ಹಗುರವಾಗಿ ಮಾತನಾಡುತ್ತಾರೆ. ಏಕವಚನದಲ್ಲಿ ಮಾತನಾಡುವಷ್ಟು ನನಗೆ ಅವರ ಜೊತೆ ಸಲಿಗೆ ಇಲ್ಲ. ಸಲಿಗೆ ಇದ್ದವರಲ್ಲಿ ಅವರು ಮಾತನಾಡಲಿ ಅಂತ ಗರಂ ಆಗಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇದು ಶೋಭೆಯಲ್ಲ. ಹಲವಾರು ಬಾರಿ ನಾನು ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ರು. ನಾನು ಕಾಂಗ್ರೆಸ್ ಸೇರುವುದಿಲ್ಲ ಅಂತ ನೇರವಾಗಿ ಹೇಳಿದ್ದೆ. ಈಗ ನಾನು ಯಾರು ಅಂತ ಗೊತ್ತಿಲ್ವಂತಾ ಅಂತ ಪ್ರಶ್ನೆ ಹಾಕಿದ್ರು.
ನಾನ್ಯಾರು ಅಂತ ಗೊತ್ತಿಲ್ಲದೆ ನನ್ನನ್ನು ಹೇಗೆ ಅವರ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾದ್ರು? ನನ್ನ ವ್ಯಕ್ತಿತ್ವ ಗೊತ್ತಿಲ್ಲದೆ ಏನೂಂತ ಪಕ್ಷಕ್ಕೆ ಸೇರಿಸಲು ಮುಂದಾಗಿದ್ದರು ಎಂದು ಪ್ರಶ್ನೆ ಹಾಕಿದ್ದಾರೆ. ಸಿದ್ದರಾಮಯ್ಯ ಆಣತಿಯಂತೆ ಸೊರಕೆ, ಪ್ರಮೋದ್ ಮಧ್ವರಾಜ್, ಅಭಯಚಂದ್ರ ಜೈನ್ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದರು. ನಾನು ಯಾರು ಅಂತ ಗೊತ್ತಿಲ್ಲದೆ ಇಷ್ಟೆಲ್ಲಾ ಮಾಡಿದ್ರಾ ಅಂತ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹಾಲಾಡಿ, ಸಿದ್ದರಾಮಯ್ಯ ಮಾತಿನಿಂದ ನಮ್ಮ ಕ್ಷೇತ್ರದ ಮತದಾರರಿಗೆ ಬಹಳ ಬೇಸರ ಆಗಿದೆ. ನಾನು ರಾಜಕೀಯವಾಗಿಯೂ ಹಗುರವಾಗಿ ಮಾತನಾಡುವ ವ್ಯಕ್ತಿ ಅಲ್ಲ. ನಾನೇನೂ ಈ ಬಗ್ಗೆ ಹೆಚ್ಚು ಹೇಳಲ್ಲ ಅಂದ್ರು. ಸಿದ್ದರಾಮಯ್ಯ ಜನವೇ ಹಗುರ. ಹಗುರ ಇದ್ದಾಗ ಇಂತಹ ಹಗುರ ಮಾತು ಬರುತ್ತದೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ಒಂದು ಹುದ್ದೆಗೆ ಹೋದ ಕೂಡಲೇ ವ್ಯಕ್ತಿಯೊಬ್ಬ ದೊಡ್ಡ ಮನುಷ್ಯ ಆಗಲ್ಲ. ಆತನ ಮಾತು ನಡವಳಿಕೆ ಸರಿ ಇರಬೇಕು. ಅದರಿಂದ ಆತ ದೊಡ್ಡವನಾಗುತ್ತಾನೆ ಎಂದು ತಿರುಗೇಟು ನೀಡಿದರು. ನಾನು ಸಿದ್ದರಾಮಯ್ಯನ ಆಶೀರ್ವಾದದಲ್ಲಿ ಬದುಕಿದವ ಅಲ್ಲ. ನನ್ನನ್ನು ಕುಂದಾಪುರದ ಜನ 56 ಸಾವಿರ ಮತದ ಅಂತರದಲ್ಲಿ ಗೆಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರ ಕಳೆದ ಚುನಾವಣೆಯಲ್ಲಿ ಏನಾಯ್ತು? ಎಷ್ಟು ಅಂತರದಲ್ಲಿ ಗೆದ್ದರು ಅಂತ ರಾಜ್ಯದ ಜನಕ್ಕೆ ಗೊತ್ತಿದೆ. ನನಗೆ ಸಿದ್ದರಾಮಯ್ಯ ಆಶೀರ್ವಾದ ಬೇಕಾಗಿಲ್ಲ. ಕುಂದಾಪುರ ಕ್ಷೇತ್ರದ ಜನರ ಪ್ರೀತಿ ಸಾಕು ಎಂದು ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv