Kumbh Mela Stampede | ಇಂದು ಸಂಜೆ ದೆಹಲಿಯಿಂದ ಬೆಳಗಾವಿಗೆ ಬರಲಿದೆ ನಾಲ್ವರ ಶವ

Public TV
1 Min Read
a Stampede The bodies of four people will arrive in Belgavi from Delhi today evening

ಬೆಳಗಾವಿ: ಮಹಾ ಕುಂಭಮೇಳದ (Maha Kumbh Mela) ಮೌನಿ ಅಮಾವಾಸ್ಯೆ ಪ್ರಯುಕ್ತ ಜನಪ್ರವಾಹ ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ (Stampede) ಮೃತಪಟ್ಟ ನಾಲ್ವರ ಶವ ಇಂದು ಸಂಜೆ ವಿಮಾನದ ಮೂಲಕ ಬೆಳಗಾವಿಗೆ (Belagavi) ಬರಲಿದೆ.

ಪ್ರಯಾಗ್‌ರಾಜ್‌ನಿಂದ (Prayagraj) ಬುಧವಾರ ರಾತ್ರಿಯೇ ಅಂಬುಲೆನ್ಸ್‌ ಮೂಲಕ ಶವಗಳು ಹೊರಟಿದ್ದು ಬೆಳಗ್ಗೆ ದೆಹಲಿ ತಲುಪಲಿದೆ. ಮಧ್ಯಾಹ್ನ 3:30ಕ್ಕೆ ದೆಹಲಿಯಿಂದ (Delhi)  ಹೊರಟ ವಿಮಾನ ಸಂಜೆ  5:30ಕ್ಕೆ ಬೆಳಗಾವಿಗೆ ಬರಲಿದೆ.

ಒಂದು ಅಂಬುಲೆನ್ಸ್‌ನಲ್ಲಿ ಜ್ಯೋತಿ ಹತ್ತರವಾಠ (44) ಮತ್ತು ಮಗಳು ಮೇಘಾ ಹತ್ತರವಾಠ(24) ಅವರ ಶವ ಇದ್ದರೆ ಮತ್ತೊಂದು ಅಂಬುಲೆನ್ಸ್‌ನಲ್ಲಿ ಶೆಟ್ಟಿ ಗಲ್ಲಿಯ ಅರುಣ್ ಕೋಪರ್ಡೆ(61), ಶಿವಾಜಿನಗರದ ಮಹಾದೇವಿ ಬಾವನೂರ(48) ಮೃತದೇಹವಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಮಂದಿ ಬಲಿ – ಇಂದು ಪ್ರಯಾಗ್‌ರಾಜ್‌ಗೆ ಯೋಗಿ ಭೇಟಿ

ಬೆಳಗಾವಿ ಡಿಸಿ ಮೊಹಮ್ಮದ್‌ ಅವರು ಶವ ಸುಗಮವಾಗಿ ನಗರಕ್ಕೆ ಬರಲು ಇಬ್ಬರು ವಿಶೇಷ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆ.

ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅರುಣ್ ಪತ್ನಿಯೂ ಗಾಯಗೊಂಡಿದ್ದಾರೆ.

ಬೆಳಗ್ಗೆಯಿಂದ ಜ್ಯೋತಿ-ಮೇಘಾ ಫೋನ್ ರಿಸೀವ್ ಮಾಡದ ಕಾರಣ ಕುಟುಂಬಸ್ಥರು ಆತಂಕದಲ್ಲಿದ್ದರು. ಬುಧವಾರ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಸಾವಿನ ಸುದ್ದಿ ಬಂದೆರಗಿದೆ. ಈ ಬೆನ್ನಲ್ಲೇ ಶೆಟ್ಟಿಗಲ್ಲಿಯ ಅರುಣ್, ಶಿವಾಜಿನಗರ ಮಹಾದೇವಿ ಸಾವಿನ ಸುದ್ದಿಯೂ ಹೊರಬಿತ್ತು.

ಪ್ರಯಾಗ್‌ರಾಜ್ ದುರಂತದಲ್ಲಿ ಸಿಲುಕಿರಬಹುದಾದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅಧಿಕಾರಿಗಳ ತಂಡವನ್ನು ಕುಂಭಮೇಳಕ್ಕೆ ಕಳಿಸಿ ಸಹಾಯವಾಣಿ ಶುರುಮಾಡಿದೆ. 080-22340676ಗೆ ಕರೆ ಮಾಡಿ ನಾಪತ್ತೆಯಾದವರ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

 

Share This Article