ಮೈಸೂರು: ನಾಳೆಯಿಂದ (ಫೆ.10) ಮೂರು ದಿನಗಳಕಾಲ ಮೈಸೂರು (Mysuru) ಜಿಲ್ಲೆಯ ಟಿ.ನರಸೀಪುರದ (T.Nnaraseepur) ತ್ರಿವೇಣಿ ಸಂಗಮದಲ್ಲಿ (Triveni Sangam) 13 ನೇ ಕುಂಭಮೇಳ (Kumbh Mela) ನಡೆಯಲಿದೆ.
ತ್ರಿವೇಣಿ ಸಂಗಮ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಇಂದು ಭೇಟಿ ನೀಡಿ ಕುಂಭಮೇಳದ ಸಿದ್ಧತಾ ಕಾರ್ಯ ಪರಿಶೀಲಿಸಿದರು. ಪುಣ್ಯಸ್ನಾನ ಸ್ಥಳ ಹಾಗೂ ಮೂಲಭೂತ ಸೌಕರ್ಯದ ಬಗ್ಗೆ ಪರಿಶೀಲನೆ ನಡೆಸಿದರು. ಕುಂಭಮೇಳದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದದೆ. ಇದೇ ವೇಳೆ ಕರ್ನಾಟಕದ ಪವಿತ್ರ ಕ್ಷೇತ್ರವೆಂದೇ ಹೆಸರಾದ ಟಿ.ನರಸಿಪುರದ ತ್ರಿವೇಣಿ ಸಂಗಮದಲ್ಲಿ ಸೋಮವಾರದಿಂದ ಕುಂಭಮೇಳ ನಡೆಯಲಿದೆ. ಬೆ. 9ರಿಂದ 9:30ರೊಳಗೆ ಶುಭ ಮೀನ ಲಗ್ನ ಮತ್ತು ಮಧ್ಯಾಹ್ನ 12ರಿಂದ 1 ಗಂಟೆವರೆಗೆ ವೃಷಭ ಲಗ್ನದಲ್ಲಿ ಕುಂಭಮೇಳದ ಪುಣ್ಯಸ್ನಾನ ಮಾಡಲು ಮುಹೂರ್ತ ನಿಗದಿ ಮಾಡಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳು: ಫೆ.10ರಂದು ತ್ರಯೋದಶಿ, ಪುಷ್ಯ ಪ್ರಾತಃಕಾಲ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ, ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅಥಿತಿ ಗಣ್ಯರಿಂದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.