– ಕೊನೆ ಕ್ಷಣದಲ್ಲೂ ರಾಜ್ಯದ ಜನರಿಗೆ ಸಿಹಿ ಸುದ್ದಿ
– ನಿನ್ನೆಯೇ ಸಾಲ ಮನ್ನಾ ಆದೇಶ ಜಾರಿ
ಬೆಂಗಳೂರು: ಅಧಿಕಾರ ಕಳೆದುಕೊಂಡ ಹೊತ್ತಲ್ಲೇ ಕುಮಾರಸ್ವಾಮಿ ಬಂಪರ್ ಗಿಫ್ಟ್ ಕೊಟ್ಟಿದ್ದು ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಿದ್ದಾರೆ. ಫೈನಾನ್ಸ್ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದ ಪಡೆದಿದ್ದ ಸಾಲವನ್ನು ಮನ್ನಾ ಮಾಡುವ ಕರ್ನಾಟಕ ಋಣ ಪರಿಹಾರ ಕಾಯ್ದೆ ನಿನ್ನೆಯಿಂದಲೇ ಜಾರಿಯಾಗಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂರಹಿತರು, ಕಾರ್ಮಿಕರು ಹಾಗೂ ಬಡವರ ಆದಾಯ 1.20 ಲಕ್ಷ ರೂ.ಗಳಿಗಿಂತ ಕಡಿಮೆ ಇದ್ದರೆ ಅವರಿಗೆ ಈ ಕಾಯ್ದೆ ಅನ್ವಯ ಆಗಲಿದೆ. ಅಲ್ಲದೇ ಈ ಬಗ್ಗೆ ಕಾಯ್ದೆಯ ಜಾರಿಗೆ ನಾನು ಕೊನೆಯ ಸಹಿ ಹಾಕಿದ್ದು, ಖಾಸಗಿ ಅವರ ಬಳಿ ಪಡೆದ ಮಾಹಿತಿಯನ್ನು ಪಡೆಯಲು ಸೂಚನೆ ನೀಡಿದ್ದೇನೆ. ಋಣ ಮುಕ್ತ ಕಾಯ್ದೆ ಅಡಿ ಅವರು ಋಣ ಮುಕ್ತರಾಗಲಿದ್ದಾರೆ. ಒಂದು ವರ್ಷಗಳ ಕಾಲ ಈ ಕಾಯ್ದೆಯ ಅವಧಿ ಇದ್ದು, 90 ದಿನಗಳ ಒಳಗೆ ನೋಡಲ್ ಅಧಿಕಾರಿಗೆ ಮಾಹಿತಿ ನೀಡಬೇಕು ಮನವಿ ಮಾಡಿದರು.
Advertisement
Advertisement
ಒನ್ ಟೈಂ ಅವಧಿಯಲ್ಲಿ ಇದು ಜಾರಿ ಆಗಲಿದ್ದು, ಚಿನ್ನ, ಭೂಮಿ ಅಡವಿಟ್ಟ ಸಾಲಮನ್ನಾ ಆಗಲಿದೆ ಎಂದರು. ಇದಕ್ಕೆ ಪ್ರೇರಣೆ ನೀಡಿದ ಮಹಿಳೆಯ ಕಥೆಯನ್ನ ವಿವರಿಸಿದ ಕುಮಾರಸ್ವಾಮಿ ಅವರು, ಪತಿಯೊಬ್ಬರು ಸಾಲ ಮಾಡಿ ಮೃತಪಟ್ಟಿದ್ದರು. ಈ ಸಾಲದ ಹೊರೆ ಪತ್ನಿಯ ಮೇಲೆ ಬಿದ್ದಿತ್ತು. ಈ ಸಾಲವನ್ನು ತೀರಿಸಲು ಮಹಿಳೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ಮಹಿಳೆ ರೈತರ ಸಾಲವನ್ನು ಮಾಡಿದಂತೆ ಈ ರೀತಿಯ ಸಾಲವನ್ನು ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿ ಮನವಿ ಮಾಡಿದರು. ಹೀಗಾಗಿ ನಾನು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು ಎಂದು ವಿವರಿಸಿದರು.
Advertisement
ನಿನ್ನೆಯವರೆಗೆ ಎಷ್ಟು ಸಾಲ ಮಾಡಿದ್ದಾರೆ ಎಷ್ಟು ವರ್ಷದ ಹಿಂದೆ ಮಾಡಿದ್ದರೂ ಕೂಡ ಇದು ಅನ್ವಯ ಆಗಲಿದೆ. 90 ದಿನಗಳ ಒಳಗೆ ಈ ಬಗ್ಗೆ ಮಾಹಿತಿ ನೀಡಿ, 5 ಎಕರೆ ಗಿಂತ ಭೂಮಿ ಕಡಿಮೆ ಇರುವವರಿಗೂ ಇದು ಅನ್ವಯ ಆಗಲಿದೆ. ಖಾಸಗಿ ಅವರಿಂದ ಪಡೆದ ಸಾಲವಷ್ಟೇ ಮನ್ನಾ ಆಗಲಿದೆ. ಆದರೆ ರಿಸರ್ವ್ ಬ್ಯಾಂಕ್ ನಿಂದ ಅನುಮತಿ ಪಡೆದು ವ್ಯವಹಾರ ಮಾಡುವವರಿಗೆ ಇದು ಅನ್ವಯ ಆಗುವುದಿಲ್ಲ. ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರವೂ ಮಾಹಿತಿ ಕೇಳಿತ್ತು. ಅಧಿಕಾರಿಗಳು ನಿರಂತರವಾಗಿ ಮಾಹಿತಿ ನೀಡಿ ಕೇಂದ್ರದ ಗೊಂದಲಗಳನ್ನು ನಿವಾರಣೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂದಿದ್ದ ಮಸೂದೆಗೆ ರಾಷ್ಟ್ರಪತಿಗಳು ಜುಲೈ 16 ರಂದು ಅಂಕಿತ ಹಾಕಿದ್ದಾರೆ ಎಂದು ತಿಳಿಸಿದರು.
Advertisement
ಈ ಸಂದರ್ಭದಲ್ಲಿ ಖಾಸಗಿಯವರಿಗೆ ಸರ್ಕಾರದಿಂದ ಹಣವನ್ನು ಪಾವತಿಸಲಾಗುತ್ತಾ ಎಂಬ ಪ್ರಶ್ನೆಗೆ, ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳು ಬಡ್ಡಿ ಹಣವನ್ನು ತಿಂದದ್ದು ಸಾಕು. ಯಾವುದೇ ಹಣವನ್ನು ಮರು ಪಾವತಿ ಮಾಡುವುದಿಲ್ಲ ಎಂದು ಉತ್ತರಿಸಿದರು.
ಕಳೆದ 14 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಹಲವು ರಾಜಕೀಯ ಸಮಸ್ಯೆಗಳ ನಡುವೆ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಹಕಾರ ನೀಡಿದ ಎಲ್ಲ ಅಧಿಕಾರಿ ವರ್ಗಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ರೈತರ ಸಾಲಮನ್ನಾ, ರೈತರ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರ ನೀಡಿದ ಅಧಿಕಾರಿಗಳಿಗೆ ಧನ್ಯವಾದ. ರಾಜಕೀಯ ಅಸ್ಥಿರತೆ ಉಂಟು ಮಾಡಲು ಕಳೆದ 14 ತಿಂಗಳು ನಡೆದ ಪ್ರಯತ್ನ ನಡುವೆ ರಾಜ್ಯದ ಆರ್ಥಿಕ ಸ್ಥಿತಿ ಕಾಪಾಡಲು ಅಸಹಕಾರ ನೀಡಿದ ಅಧಿಕಾರಿಗಳಿಗೆ ವಂದನೆ ತಿಳಿಸಿದ್ದೇನೆ ಎಂದರು.
ಮುಂದಿನ ಅವಧಿಯಲ್ಲೂ ರಾಜಕೀಯ ಅಸ್ಥಿರತೆ ನಿರ್ಮಾಣವಾಗುವ ಸಂದರ್ಭಗಳು ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಸರ್ಕಾರ ಅಸ್ಥಿರವಾಗಿದ್ದರೂ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸಲು ಸಲಹೆ ನೀಡಿದ್ದೇನೆ. ಅಧಿಕಾರದಿಂದ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ಜನರಿಗೂ ಧನ್ಯವಾದ ತಿಳಿಸುತ್ತೇನೆ. 1976 ರಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ ಇದ್ದ ಋಣ ಪರಿಹಾರ ಕಾಯ್ದೆ ಮುಂದುವರಿಸಲು ಪ್ರಯತ್ನ ಪಟ್ಟಿದ್ದೆ.