Connect with us

Karnataka

ಯೂಟರ್ನ್ ಸಿಎಂ: ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ!

Published

on

ಬೆಂಗಳೂರು: ವಿಧಾನಸೌಧದ ಸುತ್ತಲಿನ ಗೇಟ್‍ಗಳನ್ನ ತೆಗಿಸಿಬಿಡ್ತೀನಿ. ನನ್ನ ಶರ್ಟ್ ಹಿಡಿದು ಯಾರು ಬೇಕಾದರೂ ಪ್ರಶ್ನಿಸಬಹುದು ಎಂದು ಹೇಳಿದ್ದ ಎಚ್‍ಡಿ ಕುಮಾರಸ್ವಾಮಿ ಅವರು ಈಗ ಅಧಿಕಾರ ಸಿಕ್ಕ ತಕ್ಷಣ ವರಸೆ ಬದಲಿಸಿದ್ದಾರೆ.

ಹೋದಲ್ಲಿ, ಬಂದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತ ಕರೆಸಿಕೊಂಡಿರುವ ಮಾಧ್ಯಮಗಳ ಪದೇ ಪದೇ ವಾಗ್ದಾಳಿ ನಡೆಸ್ತಿದ್ದ ಮುಖ್ಯಮಂತ್ರಿಗಳು ಈಗ ಮಾಧ್ಯಮವನ್ನ ಶಕ್ತಿ ಕೇಂದ್ರದಿಂದ ದೂರ ಇಡಲು ಮುಂದಾಗಿದ್ದಾರೆ. ವಿಧಾನಸೌಧಕ್ಕೆ ಮಾಧ್ಯಮ ಪ್ರವೇಶವನ್ನ ನಿರ್ಬಂಧಿಸಿ ಮೌಖಿಕ ಆದೇಶ ಹೊರಡಿಸಿದ್ದಾರೆ.

ಈ ಆದೇಶವನ್ನು ಶಿರಸಾ ಪಾಲಿಸುತ್ತಿರುವ ಪೊಲೀಸರು ಪಾಸ್ ಇರುವ ಮಾಧ್ಯಮದವರ ವಾಹನಗಳನ್ನ ವಿಧಾನಸೌಧದ ಗೇಟ್‍ನಲ್ಲೇ ತಡೆಯುತ್ತಿದ್ದಾರೆ. ಗೇಟ್ ಬಳಿ ತಮ್ಮ ವಾಹನ ನಿಲ್ಲಿಸಬೇಕಿರುವ ಮಾಧ್ಯಮದವರು ಅಲ್ಲಿಂದ ನಡೆದುಕೊಂಡು ಹೋಗಬೇಕಿದೆ. ಈ ಆದೇಶ ಕೇವಲ ಮಾಧ್ಯಮದವರಿಗೆ ಮಾತ್ರ ಅನ್ವಯವಾಗಿದ್ದು, ವಕೀಲರು ಮತ್ತು ಸರ್ಕಾರಿ ವಾಹನಗಳಿಗೆ ವಿಧಾನಸೌಧ ಆವರಣಕ್ಕೆ ತಪಾಸಣೆ ಇಲ್ಲದೆ ಪ್ರವೇಶ ನೀಡಲಾಗಿದೆ.

ಇಷ್ಟೇ ಅಲ್ಲದೇ ಮಾಧ್ಯಮದವರು ವಿಧಾನಸೌಧದ ಒಳಗೆ ಏಕಾಏಕಿ ಓಡಾಡುವಂತಿಲ್ಲ. ನಿಮಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಲಾಗಿದೆ. ಈ ಸ್ಥಳದಲ್ಲೇ ಪ್ರತಿಕ್ರಿಯೆ ಪಡೆಯಬೇಕು ಅಂತಲೂ ಸೂಚಿಸಿದ್ದಾರೆ. ತಮ್ಮ ಸರ್ಕಾರದ ವಿರುದ್ಧದ ವರದಿಗಳ ಹಿನ್ನೆಲೆಯಲ್ಲಿ ಮಾಧ್ಯಮಗಳನ್ನು ಹತ್ತಿಕ್ಕುವ ಪರೋಕ್ಷ ಯತ್ನವೇ ಇದು ಅಂತ ಚರ್ಚೆಗೆ ಗ್ರಾಸವಾಗಿದೆ.

ಹಿಂದೆ ಹೇಳಿದ್ದು ಏನು?
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಈ ವರ್ಷದ ಜನವರಿ 3 ರಂದು ಹಿರಿಯ ನಾಗರಿಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ್ದ ಅವರು, ರಾಜ್ಯದ ಮುಖ್ಯಮಂತ್ರಿ ಸ್ಥಾನ ನನ್ನಪ್ಪನ ಆಸ್ತಿ ಅಲ್ಲ. ಅವಕಾಶ ಕೊಟ್ಟರೆ ದಿನದ 20 ಗಂಟೆ ನಿಮಗಾಗಿ ಚಾಕರಿ ಮಾಡುತ್ತೇನೆ. ಅವಕಾಶ ಕೊಡದಿದ್ದರೆ ಮನೆಯಲ್ಲಿ ಕುಳಿತುಕೊಳ್ಳುವೆ. ಇದರಲ್ಲಿ ನನ್ನ ಆಸ್ತಿ ಏನು ಹೋಗಲ್ಲ. 113 ಸ್ಥಾನವನ್ನು ಗೆಲ್ಲಲು ನಾನು ಹೊರಟಿದ್ದೇನೆ. ಸ್ವತಂತ್ರವಾಗಿ ಯಾರ ಹಂಗಿಲ್ಲದೇ ಅಧಿಕಾರ ನಡೆಸುವಂತಾಗಬೇಕು. ನಾನು ಅಧಿಕಾರಕ್ಕೆ ಬಂದರೆ 24 ತಾಸು ವಿಧಾನಸೌಧ ತೆರೆಯುತ್ತೇನೆ. ವಿಧಾನಸೌಧದ ಸುತ್ತ ಇರುವ ಬ್ಯಾರಿಕೇಡ್ ತಗೆಯುತ್ತೇನೆ. ನಾನು ಮುಖ್ಯಮಂತ್ರಿಯಾದ್ರೆ ಯಾರೂ ಬೇಕಾದ್ರೂ ಸಿಎಂ ಶರ್ಟ್ ಎಳೆದು ಪ್ರಶ್ನೆ ಮಾಡಬಹುದು ಎಂದು ಭರವಸೆ ನೀಡಿದ್ದರು.

Click to comment

Leave a Reply

Your email address will not be published. Required fields are marked *