– ಟಯರ್ ಅಂಗಡಿಯಿಂದ ಚಂದಾ ಎತ್ತಿ ಖರೀದಿಸುತ್ತಾರಾ?
– ಮುಸ್ಲಿಮರು ದೇವೇಗೌಡರ ಕುಟುಂಬವನ್ನು ಖರೀದಿಸುತ್ತಾರೆ ಎಂದಿದ್ದ ಜಮೀರ್
ಮೈಸೂರು: ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಮೌನಕ್ಕೆ ಶರಣಾಗಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಈಗ ಜಮೀರ್ ಅಹ್ಮದ್ (Zameer Ahmed) ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ತನ್ನನ್ನು ಕರಿಯ ಎಂದು ವ್ಯಂಗವಾಡಿದ್ದು ಅಲ್ಲದೇ ದೇವೇಗೌಡರ (Devegowda) ಕುಟುಂಬವನ್ನು ಮುಸ್ಲಿಮರು ಖರೀದಿಸುತ್ತಾರೆ ಎಂದಿದ್ದ ಜಮೀರ್ ಅಹ್ಮದ್ ಅವರ ಕಥೆಯನ್ನು ಮುಂದೆ ಬಿಚ್ಚಿಡುತ್ತೇನೆ ಎಂದು ಸಿಟ್ಟು ಹೊರಹಾಕಿದ್ದಾರೆ. ಕರಿಯ ಎಂದು ಕರೆದಿದ್ದಕ್ಕೆ ಜಾಸ್ತಿ ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ ತಂದೆಯ ಬಗ್ಗೆ ಜಮೀರ್ ಮಾತನಾಡಿದ್ದಕ್ಕೆ ಗರಂ ಆಗಿದ್ದಾರೆ.
ಹೆಚ್‌ಡಿಕೆ ಹೇಳಿದ್ದೇನು?
ಮುಸ್ಲಿಮರು ಟಯರ್ ಅಂಗಡಿ ಇಟ್ಟುಕೊಂಡಿರುತ್ತಾರೆ. ಅವರ ಬಳಿಕ ಚಂದಾ ಎತ್ತಿ ದೇವೇಗೌಡರನ್ನು ಕೊಂಡುಕೊಳ್ಳುತ್ತಾರಾ? ಜಮೀರ್‌ಗೆ ದುಡ್ಡಿನ ಮದ ಬಂದಿದೆ. ನಿಯತ್ತಾಗಿ ಬಸ್ ಓಡಿಸಿ ಬಂದ ದುಡ್ಡಾ ಅದು? ಇದೆನ್ನೆಲ್ಲಾ ಮುಂದಿನ ದಿನದಲ್ಲಿ ಮಾತನಾಡುತ್ತೇನೆ. ಇದನ್ನೂ ಓದಿ: ನಾನು ಯಾವತ್ತೂ ಕುಳ್ಳ ಅಂತ ಕರೆದಿಲ್ಲ: ಜಮೀರ್‌ಗೆ ಕುಮಾರಸ್ವಾಮಿ ತಿರುಗೇಟು
ಕುಮಾರಸ್ವಾಮಿಯದ್ದು ಜೆಡಿಎಸ್‌ನ ಕಥೆ ಮುಗಿಯಿತು ಅಂತ ಅಂದುಕೊಂಡಿದ್ದರು. ಈಗ ಮತ್ತೆ ನಮಗೆ ಶಕ್ತಿ ಬಂದಿದೆ ಅದನ್ನು ತಡೆದುಕೊಳ್ಳಲು ಆಗದೇ ಈ ರೀತಿ ಮಾತನಾಡುತ್ತಿದ್ದಾರೆ. ಜಮೀರ್ ಮತ್ತು ಆ ನಾಲ್ಕು ಜನರ ಜೊತೆ ಇದ್ದದ್ದು ನನ್ನ ಜೀವನದ ಅತ್ಯಂತ ಕರಳ ದಿನಗಳು. ಅವರನ್ನು ಈಗ ಕೊಚ್ಚೆ ಎಂದು ಈಗ ದೂರ ಇಟ್ಟಿದ್ದೇನೆ.
ಕೊಚ್ಚೆಗಳ ಬಗ್ಗೆ ಪದೇ ಪದೇ ಯಾಕೆ ನನ್ನನ್ನು ಮಾತನಾಡಿಸುತ್ತೀರಿ. ನಿಮಗೆ ಮೋಸ ಮಾಡಿದ ದಿನ ನಾನು ಏನಾಗ್ತೀನಿ ಎಂದು ನೂರು ಬಾರಿ ಜಮೀರ್ ನನಗೆ ಹೇಳಿದ್ದಾನೆ. ಆ ಪದ ಯಾವುದು ಎಂಬುದನ್ನು ನನ್ನ ಬಾಯಿಯಿಂದ ಹೇಳಿಸಬೇಡಿ. ಅದು ಅತ್ಯಂತ ಕೆಟ್ಟ ಪದ. ನನಗೆ ಅದನ್ನು ಸಾರ್ವಜನಿಕವಾಗಿ ಬಳಸಲು ಆಗುತ್ತಿಲ್ಲ. ಮೆಕ್ಕಾಗೆ ಹೋಗುತ್ತಾರಲ್ಲ ಅಲ್ಲಿ ಆ ಪದವನ್ನು ಅವರು ಜ್ಞಾಪಿಸಿಕೊಳ್ಳಲಿ. ಅಂತಹ ಪದ ಅದು. ಈಗ ದುಡ್ಡಿನ ಮದದಲ್ಲಿ ಅವರು ಮಾತನಾಡುತ್ತಿದ್ದಾರೆ.