ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಜೆಡಿಎಸ್ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಬೆಳಗ್ಗೆಯಿಂದ ರಾತ್ರಿವರೆಗೆ ಕೆಲಸ ಮಾಡುತ್ತಿರುವ ಕಾರಣ ಗ್ರಾಮವಾಸ್ತವ್ಯ ಮಾಡಲು ಸಮಯ ಸಿಗುತ್ತಿಲ್ಲ. 18 ಗಂಟೆ ಗಂಟೆಗಳ ಕಾಲ ಕೆಲಸ ಮಾಡುವ ಕಾರಣ ಆರೋಗ್ಯದ ಬಗ್ಗೆ ನನಗೆ ಆತಂಕವಾಗುತ್ತಿದೆ ಎಂದು ಮಗನ ಬಗ್ಗೆ ದೇವೇಗೌಡರು ಕಾಳಜಿ ವ್ಯಕ್ತಪಡಿಸಿದ್ದಾರೆ.
Advertisement
ನಮ್ಮನ್ನು ಜನ ಕೈಬಿಟ್ಟರೂ, ನಾವು ಕೊಟ್ಟ ಮಾತು ಬಿಡೊಲ್ಲ ಎಂದು ಭಾವಿಸಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ದಾರೆ. ಒಂದು ಕಡೆಗೆ ಮಾಜಿ ಸ್ನೇಹಿತರ ಅಸಹಕಾರ, ಮತ್ತೊಂದು ಕಡೆ ವಿಧಾನಸಭೆಯಲ್ಲಿ ಹೋರಾಟ ಮಾಡುವ ಸ್ಥಿತಿ ಇದೆ. ಈ ಬೆಳವಣಿಗೆಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿರುವೆ ಎಂದು ದೇವೇಗೌಡರು ಅಸಮಾಧಾನ ಹೊರ ಹಾಕಿದರು.
Advertisement
Advertisement
ನಾನು ವಿಶ್ರಾಂತಿ ಪಡೆಯಲ್ಲ, ಹೋರಾಟಕ್ಕೆ ಸಿದ್ಧವಾಗಿರುವೆ. ಮತ್ತೆ ನಾವೆಲ್ಲರೂ ಹೋರಾಟ ಮಾಡೋಣ. ಆದರೆ ಮೈತ್ರಿ ಸರ್ಕಾರಕ್ಕೆ ಕುಂದು ಬಾರದಂತೆ ನಡೆದುಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆಕೊಟ್ಟರು.
Advertisement
ಸಮ್ಮಿಶ್ರ ಸರ್ಕಾರದ ಜವಾಬ್ದಾರಿಯನ್ನು ಕುಮಾರಸ್ವಾಮಿ ಹೊತ್ತಿದ್ದಾರೆ. ಆದರೆ ರಾಜ್ಯದ ಜನರು ಅವರನ್ನು ಗುರುತಿಸಿಲ್ಲ. ಕುಮಾರಸ್ವಾಮಿ ಕಳೆದ 3 ವರ್ಷಗಳಿಂದ ರಾಜ್ಯಾದಂತ ಪ್ರವಾಸ ಮಾಡಿದ್ದಾರೆ. ನಮ್ಮ ಪಕ್ಷ 100 ಕ್ಕೂ ಹೆಚ್ಚು ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎನ್ನುವ ಭರವಸೆ ಇತ್ತು. ಆದರೆ ಅದು ಆಗಲಿಲ್ಲ. ಈಗ ಜನರ ತೀರ್ಪನ್ನು ತಲೆಬಾಗಿ ಒಪ್ಪಿಕೊಂಡಿದ್ದೇವೆ. ಸೋಲಿಗೆ ಕಾರ್ಯಕರ್ತರಲ್ಲಿ ದೋಷಗಳು ಕಾರಣವಾಗಿದ್ದರೆ ಅದನ್ನು ತಿದ್ದಿಕೊಳ್ಳಬೇಕು ಎಂದು ಸಲಹೆ ನೀಡಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ 20 ತಿಂಗಳ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವಲ್ಲಿ ನಮ್ಮ ಕಾರ್ಯಕರ್ತರು ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಬೇಕು. ನಾವು ಕಾಂಗ್ರೆಸ್ ಪಕ್ಷವನ್ನು ದೂರಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರ ನಡೆಸಿಕೊಂಡು ಹೋಗುವುದು ತುಂಬ ಕಷ್ಟ. ವಿರೋಧ ಪಕ್ಷದಲ್ಲಿ 104 ಜನ ಇರುವುದು ಕರ್ನಾಟಕ ಇತಿಹಾಸದಲ್ಲೆ ಇದೇ ಮೊದಲು. ಬಿಜೆಪಿಯವರನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.