ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಇಂದಿಗೆ ನೂರು ದಿನ ಪೂರೈಸುತ್ತಿದೆ. ನೂರಾರು ಗೊಂದಲಗಳ ನಡುವೆ ಹತ್ತಾರು ವಿವಾದಗಳ ನಡುವೆ ಸರ್ಕಾರ ನೂರು ದಿನ ಪೂರೈಸಿದ್ದು, ಸರ್ಕಾರದ ನೆಗೆಟಿವ್ ಹಾಗೂ ಪಾಸಿಟಿವ್ ಘಟನೆಗಳ ರಿಪೋರ್ಟ್ ಇಲ್ಲಿದೆ.
ಅತಂತ್ರ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿದ ದೋಸ್ತಿ ಸರ್ಕಾರಕ್ಕೆ ಇಂದಿಗೆ ನೂರು ದಿನದ ಸಂಭ್ರಮ. ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ವಿಪಕ್ಷದ ಆರೋಪದ ನಡುವೆಯು ಒಂದಷ್ಟು ಮಹತ್ವದ ಕಾರ್ಯಗಳಾಗಿವೆ. ಜೊತೆ ಜೊತೆಗೆ ಚುನಾವಣಾ ಸಂದರ್ಭದಲ್ಲಿ ನೀಡಿದ ಸಾಕಷ್ಟು ಭರವಸೆಗಳು ಬಾಕಿ ಇವೆ. ಸರ್ಕಾರದ ಬಗ್ಗೆ ಪಾಸಿಟಿವ್ ಮಾತಿನ ಜೊತೆಗೆ ಅಷ್ಟೆ ಪ್ರಮಾಣದಲ್ಲಿ ನೆಗೆಟಿವ್ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸರ್ಕಾರಕ್ಕೆ ಪ್ಲಸ್ ಆಗಿದ್ದು ಯಾವುದು? ನೆಗೆಟಿವ್ ಅನ್ನಿಸಿಕೊಂಡಿದ್ದು ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Advertisement
ಶತಕದ ಸಾಧನೆ
* ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾ
* ಲೇವಾದೇವಿ ಸಾಲ ಮನ್ನಾ ಯೋಜನೆ. ಫುಟ್ ಪಾತ್ ವ್ಯಾಪಾರಿಗಳಿಗೆ ನಿತ್ಯ ಸಾವಿರ ಸಾಲ ಕೊಡುವ ಮೊಬೈಲ್ ಬ್ಯಾಂಕ್ ವ್ಯವಸ್ಥೆ ಜಾರಿಗೆ ತರುವ ಚಿಂತನೆ.
* ರೈತರಿಗೆ ಆತ್ಮ ಸ್ಥೈರ್ಯ ತುಂಬಲು ರೈತರ ಜೊತೆ ಗದ್ದೆಗೆ ಇಳಿದು ನಾಟಿ ಮಾಡಿದ್ದು.
Advertisement
ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 40 ಸಾವಿರ ಕೋಟಿಗು ಹೆಚ್ಚಿನ ಸಾಲ ಮನ್ನ ಕುಮಾರಸ್ವಾಮಿ ಸರ್ಕಾರದ ಐತಿಹಾಸಿಕ ಸಾಧನೆ. ಒಂದು ಹೆಜ್ಜೆ ಮುಂದೆ ಹೋಗಿ ಸಿಎಂ ಕುಮಾರಸ್ವಾಮಿ ಖಾಸಗಿ ಸಾಲದ ಋಣಮುಕ್ತ ಕಾಯ್ದೆಗೆ ಸುಗ್ರಿವಾಜ್ಞೆ ಹೊರಡಿಸಿ ಸೈ ಅನ್ನಿಸಿಕೊಂಡಿದ್ದಾರೆ. ಅಲ್ಲದೆ ರಾಜ್ಯದ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಮಂಡ್ಯದಲ್ಲಿ ರೈತರ ಗದ್ದೆಗೆ ಇಳಿದು ನಾಟಿ ಕೆಲಸ ಮಾಡುವ ಮೂಲಕ ರೈತರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.
Advertisement
Advertisement
* ಸರ್ಕಾರಿ ಶಾಲೆಯಲ್ಲಿ ಓದುವ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಣೆಗೆ ತೀರ್ಮಾನ.
* ಕೊಡಗು ಪ್ರವಾಹಕ್ಕೆ ಉತ್ತಮವಾದ ಸ್ಪಂದನೆ.
* ವಾರಕ್ಕೊಮ್ಮೆ ಪ್ರತಿ ಶನಿವಾರದಂದು ಜನತಾ ದರ್ಶನ ಕಾರ್ಯಕ್ರಮ.
ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಲು 569 ಕೋಟಿ ಮೀಸಲಿಟ್ಟ ಸರ್ಕಾರ ಶಾಲ ಮಕ್ಕಳ ಮನಗೆಲ್ಲುವ ಪ್ರಯತ್ನ ಮಾಡಿತು. ಅನಿರೀಕ್ಷಿತವಾಗಿ ಸಂಭವಿಸಿದ ಮಡಕೇರಿ ಪ್ರವಾಹ ಸಂದರ್ಭದಲ್ಲಿ ಸಿಎಂ ಸೇರಿದಂತೆ ಸರ್ಕಾರದ ಎಲ್ಲಾ ಸಚಿವರ ಸ್ಪಂದನೆ ಹಾಗೂ ಸರ್ಕಾರದ ಕಾರ್ಯ ವೈಖರಿ ರಾಜ್ಯಾದ್ಯಂತ ವ್ಯಕ್ತವಾದ ಜನ ಬೆಂಬಲ ಸರ್ಕಾರದ ಇಮೇಜನ ಕೊಂಚ ಹೆಚ್ಚಿಸಿದ್ದಂತು ಹೌದು. ಕುಮಾರಸ್ವಾಮಿ ಅವರಿಗೆ ಜನಪರ ಸಿಎಂ ಎಂಬ ಇಮೇಜ್ ತಂದು ಕೊಟ್ಟ ಜನಪ್ರಿಯ ಜನತಾ ದರ್ಶನ ಯೋಜನೆಗೆ ಪ್ರತಿ ಶನಿವಾರ ಮೀಸಲಿಟ್ಟಿದ್ದು ಜನರ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
* ವಿಧಾನಸೌಧಲ್ಲಿ ದಲ್ಲಾಳಿಗಳಿಗೆ ಬ್ರೇಕ್ ಹಾಕುವ ಹೇಳಿಕೆ ನೀಡಿದ್ದು
* ಮೆಟ್ರೊ ರೈಲಿಗೆ ಇನ್ಫೊಸಿಸ್ ಬೃಹತ್ ಕೊಡುಗೆ ನೀಡಿದ ಅವಧಿ
* ವಿಪಕ್ಷವನ್ನ ಜಂಟಿಯಾಗಿ ಎದುರಿಸುತ್ತಿರುವುದು.
ಹೀಗೆ ಹಲವು ಸಾಧನೆಯೊಂದಿಗೆ 100 ದಿನ ಪೂರೈಸುತ್ತಿರುವ ಸರ್ಕಾರ ಹಲವಾರು ನೆಗೆಟಿವ್ ವಿಚಾರಗಳು ಸಹ ಸದ್ದು ಮಾಡಿದೆ. ರಾಜ್ಯದ ಜನ ಅನುಮಾನದಿಂದ ನೋಡುವಂತೆ ಮಾಡಿದೆ. ಅದರ ವಿವರ ಇಲ್ಲಿದೆ
ಶತಕದ ನಿರಾಸೆ
* ಹೊಸ ಬಜೆಟ್ ಮಂಡಿಸುವುದಕ್ಕೇ ಆಕ್ಷೇಪ ಹಾಗೂ ಗೊಂದಲ
* ಬಜೆಟ್ ಮಂಡಿಸಿದ ಮೇಲೆ
-ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ ಆರೋಪ
-ರಾಮನಗರ,ಮಂಡ್ಯಕ್ಕೆ ಮಾತ್ರ ಸಿಎಂ ಎಂಬಂತೆ ಸಿಎಂ ನಡವಳಿಕೆ
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ರು. ಸಿಎಂ ಕುಮಾರಸ್ವಾಮಿ ಮಂಡಿಸಿದ್ದು ಪೂರ್ಣ ಪ್ರಮಾಣದ ಬಜೆಟ್ ಅಥವಾ ಹಳೆ ಬಜೆಟ್ ನ ಮುಂದುವರಿಕೆಯೋ ಎಂಬುದರ ಬಗ್ಗೆ ಆದ ಗೊಂದಲ ಸರ್ಕಾರದ ಇಮೇಜನ್ನ ಡ್ಯಾಮೇಜ್ ಮಾಡಿತ್ತು. ಮಂಡಿಸಿದ ಬಜೆಟ್ ನಲ್ಲಿ ಉತ್ತರ ಕರ್ನಾಟಕ ಕಡೆಗಣಿಸಿದ ಆರೋಪಕ್ಕೂ ಸರ್ಕಾರ ಗುರಿಯಾಯ್ತು. ಅಲ್ಲದೆ ಕೇವಲ ರಾಮನಗರ ಮಂಡ್ಯ ಹಾಗೂ ಹಾಸನಕ್ಕೆ ಹೆಚ್ಚಿನ ಅನುಧಾನ ಕೊಟ್ಟ ಆರೋಪಕ್ಕೂ ಸಮ್ಮಿಶ್ರ ಸರ್ಕಾರ ಗುರಿ ಆಯ್ತು.
* ಆಲಮಟ್ಟಿಗೆ ಬಾಗಿನ ಅರ್ಪಿಸದೇ ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ
* ಪೆಟ್ರೋಲ್, ಡಿಸೆಲ್ ಮೇಲೆ ಸೆಸ್-ಸಿದ್ದು ವಿರೋಧದ ನಡುವೆಯೂ ಸುಂಕ ಹೆಚ್ಚಿಸಿ ಮೇಲುಗೈ ಸಾಧಿಸಿ ಜನರ ಮೇಲೆ ಹೆಚ್ಚಿನ ಹೊರೆ
* ಮೈತ್ರಿ ಸರ್ಕಾರ ಬಂದ ಬಳಿಕ ಹಿಂದೆಂದು ಆಗದಷ್ಟು ವರ್ಗಾವಣೆ ದಂಧೆ ಬಗ್ಗೆ ಪ್ರತಿಪಕ್ಷಗಳಿಂದ ಕೇಳಿಬರುತ್ತಿರುವ ಆರೋಪ
ಹಳೆ ಮೈಸೂರು ಭಾಗದ ಜಲಾಶಯಗಳಿಗೆ ಬಾಗಿನ ಅರ್ಪಿಸಿದ ಸಿಎಂ ಉತ್ತರ ಕರ್ನಾಟಕದ ಅಲಮಟ್ಟಿಯಂತಹ ಬೃಹತ್ ಜಲಾಶಯಗಳನ್ನು ಕಡೆಗಣಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾದರು. ರೈತರ ಸಾಲಮನ್ನಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿ ವಾಹನ ಸವಾರರ ಕೆಂಗಣ್ಣಿಗೆ ಸರ್ಕಾರ ಗುರಿಯಾಯ್ತು.
* ಪ್ರತಿ ಇಲಾಖೆಯಲ್ಲೂ ಎಚ್.ಡಿ.ರೇವಣ್ಣನವರ ಹಸ್ತಕ್ಷೇಪ.
* ರೇವಣ್ಣ ನಡವಳಿಕೆಯಿಂದ ಬೇಸತ್ತಿರುವ ವಿವಿಧ ಇಲಾಖೆಗಳ ಸಚಿವರು
* ವಿಧಾನಸೌಧವನ್ನೂ ಸಾರ್ವಜನಿಕರಿಗೆ ಮುಕ್ತಗೊಳಿಸಿಲ್ಲ, ವಿಧಾನಸೌಧದ ದಲ್ಲಾಳಿಗಳಿಗೂ ಬ್ರೇಕ್ ಹಾಕಲಿಲ್ಲ.
* ಸರ್ಕಾರದಲ್ಲಿ ಸಮನ್ವಯದ ಕೊರತೆ.
ಸರ್ಕಾರಕ್ಕೆ ದೊಡ್ಡ ತಲೆನೋವು ಅನ್ನಿಸಿಕೊಂಡಿದ್ದು ಸಚಿವ ಹೆಚ್.ಡಿ.ರೇವಣ್ಣ ವರ್ತನೆ, ಸೂಪರ್ ಸಿಎಂ ರೀತಿ ಎಲ್ಲರನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸುತ್ತಿರುವುದು. ನಾನು ಅಧಿಕಾರಕ್ಕೆ ಬಂದರೆ ವಿಧಾನ ಸೌಧದ ಬಾಗಿಲು ಕಿತ್ತು ಹಾಕುತ್ತೇನೆ. ವಿಧಾನಸೌಧದಲ್ಲಿ ದಲ್ಲಾಳಿಗಳಿಗೆ ಬ್ರೇಕ್ ಹಾಕುತ್ತೇನೆ ಎಂದಿದ್ದ ಸಿಎಂ ಕುಮಾರಸ್ವಾಮಿ ಅವೆರಡು ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಇನ್ನೊಂದೆಡೆ ಕೆಲವು ವಿಷಯಗಳಲ್ಲಿ ದೋಸ್ತಿ ಪಕ್ಷಗಳಲ್ಲಿ ತಾಳ ಮೇಳ ಕೂಡಿ ಬರುತ್ತಿಲ್ಲ. ಇದು ಮಿತ್ರ ಪಕ್ಷಗಳಲ್ಲಿ ಸಮನ್ವಯ ಇಲ್ಲಾ ಎಂಬುದನ್ನು ಎತ್ತಿ ತೋರಿಸುತ್ತಿದೆ.
ಹೀಗೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ 100 ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಎರಡು ಅಂಶಗಳು ಕಂಡು ಬರುತ್ತಿವೆ. ನೂರು ದಿನದ ಸಾಧನೆ ಮೇಲೆ ಜನಾಭಿಪ್ರಾಯ ರೂಪುಗೊಳ್ಳದಿರಬಹುದು. ಆದರೆ ಸರ್ಕಾರದ ಆರಂಭದ ದಿನಗಳ ನಡೆಯು ಸರ್ಕಾರದ ಒಟ್ಟಾರೆ ಸಾಧನೆಯ ಮೇಲೆ ಪರಿಣಾಮ ಬೀರುವುದಂತು ಹೌದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv