– ನನ್ನ ಆಸೆಯಂತೆ ಮಗನ ವಿವಾಹ ನಡೆದಿಲ್ಲ
– ನಿಖಿಲ್, ರೇವತಿಯಿಂದ ಕಿಟ್ ವಿತರಣೆಗೆ ಚಾಲನೆ
ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಸ್ಥರು ರಾಮನಗರ ಮತ್ತು ಚನ್ನಪಟ್ಟಣ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್‍ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕೂಡ ಆಗಮಿಸಿದ್ದರು. ಸುಮಾರು 60 ಸಾವಿರ ಬಡ ಕುಟುಂಬಳಿಗೆ ಅಕ್ಕಿ, ಬೇಳೆ ಸಕ್ಕರೆ ಇರುವ ಕಿಟ್‍ಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
Advertisement
Advertisement
ಈ ವೇಳೆ ಮಾಧ್ಯಮಗಳ ಜೊತೆ ಕುಮಾರಸ್ವಾಮಿ, ಸುಮಾರು 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ನನ್ನ ಮಗನ ಮದುವೆಯನ್ನು ರಾಮನಗರದಲ್ಲಿ ಮಾಡಬೇಕೆಂಬ ನನ್ನ ಆಸೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಗೆ ನಾನು ಏನು ಹಣ ವೆಚ್ಚ ಮಾಡಬೇಕು ಎಂದುಕೊಂಡಿದ್ದೆನೋ, ಆ ವೆಚ್ಚವನ್ನ ಎರಡು ಕ್ಷೇತ್ರಗಳಿಗೆ ವಿನಿಯೋಗ ಮಾಡುತ್ತಿದ್ದೇನೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಗ ಮತ್ತು ಸೊಸೆಯನ್ನು ಕರೆದುಕೊಂಡು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದೇನೆ. ಕ್ಷೇತ್ರದ ಶಾಸಕರು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಈಗಾಗಲೇ ಶುರು ಮಾಡಿದ್ದಾರೆ ಎಂದು ತಿಳಿಸಿದರು.
Advertisement
Advertisement
ಕೊರೊನಾದಿಂದ ಬಡವರ ಆರ್ಥಿಕ ಸ್ಥಿತಿ ಕೆಳಗೆ ಇಳಿದಿದೆ. ಬಡವರಿಗೆ ಇಂತಹ ಸಮಯದಲ್ಲಿ ಹಣ ಖರ್ಚು ಮಾಡುವುದು ಸರ್ಕಾರದ ಕರ್ತವ್ಯ. ಚಿತ್ರದುರ್ಗದ ಓರ್ವ ಮಹಿಳೆ ಈರುಳ್ಳಿ ಚೀಲದ ಮುಂದೆ ನಿಂತು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ರೈತರ ಸಮಸ್ಯೆಗಳು ಕೂಡ ಇದೆ ರೀತಿ ಇದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ರೈತರ ನೆರವಿಗೆ ಅಂತ ಸರ್ಕಾರದ ಅಧಿಕಾರಿಗಳು 450 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಪರಿಹಾರವನ್ನಾದರೂ ಸರ್ಕಾರ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸಿಎಂಗೆ ಮನವಿ ಮಾಡಿದರು.
ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಮಾಹಿತಿ ಇದೆ. ರಾಜ್ಯದ ಜನರಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಶಾಲೆಯ ಶುಲ್ಕ ಕಟ್ಟಲು ವಿನಾಯಿತಿ ನೀಡಬೇಕು. ಸರ್ಕಾರ ತಗೆದುಕೊಳ್ಳುವ ನಿರ್ಣಯಗಳು ಬಡವರ ಪರವಾಗಿ ಇರಬೇಕು. ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮ್ಯೂಚುಯಲ್ ಫಂಡ್ ತೆಗೆದುಕೊಂಡಿದೆ. ಇದು ಕೇವಲ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಅಂಬಾನಿ ಹಾಗೂ ಟಾಟಾ ಅಂತವರಿಗೆ ಮಾತ್ರ ಈ ಮ್ಯೂಚುಯಲ್ ಫಂಡ್ ಉಪಯೋಗವಾಗುತ್ತೆ. ಸಣ್ಣ ಕಾರ್ಖಾನೆ ನಡೆಸುವವರಿಗೆ ಇದು ನೆರವಾಗುವುದಿಲ್ಲ. ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.