ಸುಳ್ಳನ್ನ ನಿಜ ಮಾಡೋದ್ರಲ್ಲಿ ಬಿಜೆಪಿಯವ್ರು ಎಕ್ಸ್‌ಪಟ್ಸ್‌: ಎಚ್‍ಡಿಕೆ

Public TV
2 Min Read
HDK 1

ರಾಮನಗರ: ಬಿಜೆಪಿಯವರು ಸುಳ್ಳನ್ನು ನಿಜ ಮಾಡುವುದರಲ್ಲಿ ಎಕ್ಸ್​​ಪರ್ಟ್​ಗಳಿದ್ದಾರೆ. ಸಿಎಎ ಹಾಗೂ ಎನ್‍ಆರ್ ಸಿ ವಿರೋಧಿ ಪ್ರತಿಭಟನೆಗಳಿಗೆ ವಿದೇಶಗಳಿಂದ ಪಿಎಫ್‍ಐ ಸಂಘಟನೆಗೆ ಹಣ ಬಂದಿರುವ ಮಾಹಿತಿಯಿದ್ದರೆ ತಕ್ಷಣ ಕ್ರಮಕೈಗೊಳ್ಳಿ. ಬರೀ ಹೇಳಿಕೆ ಕೊಟ್ಟು ಎಲ್ಲಿಂದಲೋ ಹಣ ಬರುತ್ತಿದೆ ಎನ್ನುವುದು ರಾಜಕೀಯ ಹೇಳಿಕೆಗಳಾಗಬಾರದು ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ನಡೆಸುತ್ತಿರುವ ಗ್ರಾಮವಾರು ಜನಸಂಪರ್ಕ ಸಭೆಯ 2ನೇ ದಿನವಾದ ಇಂದು ತಿಟ್ಟಮಾರನಹಳ್ಳಿ ಗ್ರಾಮದಿಂದ ಸಭೆ ಆರಂಭಿಸಿ 15 ಹಳ್ಳಿಗಳ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದ್ರು. ಅಲ್ಲದೇ ಸ್ಥಳದಲ್ಲಿಯೇ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

RMG HDK

ಈ ವೇಳೆ ಮಾತನಾಡಿದ ಎಚ್‍ಡಿಕೆ ಅವರು, ಪಿಎಫ್‍ಐಗೆ ಹಣ ಬಂದಿದೆ ಎನ್ನುವುದಾದರೆ ಎಲ್ಲಾ ಇಲಾಖೆಗಳು ಅವರ ಕೈನಲ್ಲೇ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಜೊತೆಗೂಡಿ ಕಪ್ಪುಹಣವೋ ಮತ್ತೊಂದು ಹಣವೋ ಎಂಬ ಬಗ್ಗೆ ತನಿಖೆ ನಡೆಸಲಿ. ಸರ್ಕಾರದ ಅಸ್ಥಿರತೆಗೆ ಕಳ್ಳದಾರಿಯ ಹಣ ಬಂದಿದ್ದರೆ ಅಂತಹವರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಲಿ ಎಂದರು.

ಇದೇ ವೇಳೆ ಮಿಣಿಮಿಣಿ ಪೌಡರ್ ವೀಡಿಯೋ ವೈರಲ್ ವಿಚಾರವಾಗಿ ಸಚಿವ ಸಿ.ಟಿ ರವಿಯವರು ನೀಡಿದ್ದ ಎಚ್‍ಡಿಕೆ ಕೂಲಾಗಿರಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿಯವರ ಮೇಲೆ ಏಕೆ ಆಕ್ರೋಶ ವ್ಯಕ್ತಪಡಿಸಲಿ. ಸಮಾಜದಲ್ಲಿ ಶಾಂತಿ ವಾತಾವರಣ ಕದಡುವುದನ್ನು ಸರಿಪಡಿಸಿಕೊಳ್ಳಿ ಎನ್ನುತ್ತೇನೆ. ಅದಕ್ಕೆ ನನ್ನ ಮೇಲೆ ಇಲ್ಲಸಲ್ಲದ ಅಸಹ್ಯಕರ ರೀತಿಯಲ್ಲಿ ಕೀಳು ಅಭಿರುಚಿಯ ವಿಷಯಗಳನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಮೂಲಕ ವಿಕೃತ ಸಂತೋಷಪಡುತ್ತಿದ್ದಾರೆ. ನಾನು ಇದೆಲ್ಲವನ್ನು ಕೂಲಾಗಿಯೇ ತೆಗೆದುಕೊಂಡಿದ್ದು, ನನ್ನಷ್ಟು ತಾಳ್ಮೆಯಿಂದ ರಾಜಕೀಯದಲ್ಲಿ ಇರುವವ ಮತ್ತೊಬ್ಬನಿಲ್ಲ ಎಂದು ತಿಳಿಸಿದರು.

Basanagowda Patil Yatnal

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ನಾಯಕರ ಈ ರೀತಿಯ ಹೇಳಿಕೆಗಳು ಸಮಾಜವನ್ನು ಹಾಳು ಮಾಡುವಂತಹ ಕೆಲಸವಿದು. ಸ್ವಾತಂತ್ರ್ಯ ತರಬೇಕಾದ್ರೆ ಹೋರಾಟ ಮಾಡಿದ ವ್ಯಕ್ತಿಗಳು ದೇಶದ ಮುಂದಿನ ಭದ್ರ ಬುನಾದಿಗೆ ತೀರ್ಮಾನ ಮಾಡಿದ್ದಾರೆ. ಈ ವೇಳೆ ಇವರು ಹುಟ್ಟೇ ಇರಲಿಲ್ಲವಲ್ಲ. ಹುಟ್ಟಿಲ್ಲದವೆಲ್ಲ ಇಂದು ಮಾತನಾಡುತ್ತಾರೆ. ಇದಕ್ಕೆಲ್ಲ ಉತ್ತರ ಕೊಡಲಿಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯರ ಬಾದಾಮಿ ಕ್ಷೇತ್ರದಕ್ಕೆ ನೀಡಿದ್ದ ಅನುದಾನವನ್ನು ಈಗ ಬಿಡುಗಡೆ ಮಾಡಿದ್ದಾರೆ ಅಷ್ಟೇ. ಸರ್ಕಾರದಲ್ಲಿ ಬಿಜೆಪಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಜೆಡಿಎಸ್- ಕಾಂಗ್ರೆಸ್ ಕ್ಷೇತ್ರಗಳ ಅನುದಾನ ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಕೊಡಗು ನೆರೆ ಪ್ರವಾಹದ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಟ್ವೀಟ್‍ಗೆ ಗುಡುಗಿದ ಎಚ್‍ಡಿಕೆ, ಕೊಡಗು ಪ್ರವಾಹದ ವೇಳೆ ನೆರೆ ಪರಿಹಾರಕ್ಕೆ ಎಷ್ಟು ಹಣ ಕೊಟ್ಟಿದ್ದೇನೆ? ಎಷ್ಟು ಮನೆ ಕಟ್ಟಿಕೊಟ್ಟಿದ್ದೇನೆ ಎಂಬುವುದನ್ನು ಪ್ರತಾಪ್ ಸಿಂಹ ಹೋಗಿ ನೋಡಲಿ. ಪ್ರತಾಪ್ ಸಿಂಹನ ಕೈಲಿ ಹೇಳಿಸಿಕೊಳ್ಳಬೇಕಾ ನಾನು? ಬರವಣಿಗೆಯಲ್ಲ ಮುಖ್ಯ, ಜನಗಳ ಭಾವನೆಗಳಿಗೆ ಯಾವ ರೀತಿ ಸ್ಪಂಧಿಸಬೇಕು ಎಂಬುವುದನ್ನು ಅಳವಡಿಸಿಕೊಂಡಿದ್ದೇನೆ. ರೈಟಿಂಗ್ ನಲ್ಲಿ, ಟ್ವೀಟ್ ಮೂಲಕ ನಾನು ಕೆಟ್ಟ ಭಾವನೆ ವ್ಯಕ್ತಪಡಿಸುವವನಲ್ಲ. ನಿಮಗೆ ಯೋಗ್ಯತೆಯಿದ್ದರೆ ಸಿಎಂ, ಪಿಎಂಗೆ ಹೇಳಿ ಜನರ ಸಮಸ್ಯೆ ಬಗೆಹರಿಸಿ ಎಂದರು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *