ಬೆಂಗಳೂರು: ಕೈ ನನ್ನ ತುತ್ತನ್ನು ಕಸಿದುಕೊಂಡಿದೆ. ಹೀಗಾಗಿ ನನ್ನ ಕೈಯನ್ನು ಇಂದು ನಾನೇ ಕಡಿದುಕೊಳ್ಳುತ್ತಿದ್ದೇನೆ. ಆದ್ರೆ ಪಕ್ಷ ಬದಲಾದ್ರೂ, ವ್ಯಕ್ತಿ ಮಾತ್ರ ಬದಲಾಗುವುದಿಲ್ಲ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುತ್ತೇನೆ ಎಂದು ಕುಮಾರ್ ಬಂಗಾರಪ್ಪ ಅಧಿಕೃತವಾಗಿ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತು ಇಂದು ಪರಮೇಶ್ವರ್‍ಗೆ ರಾಜೀನಾಮೆ ಪತ್ರವನ್ನು ಕಳುಹಿಸುತ್ತಿದ್ದೇನೆ. ಅವರಿಗೆ ಕೇವಲ ಎರಡು ಸಾಲಿನ ಪತ್ರವನ್ನು ನೀಡುತ್ತಿಲ್ಲ. ಅದರಲ್ಲಿ ರಾಜೀನಾಮೆಗೆ ಯಾರು ಕಾರಣ, ಏನು ಕಾರಣ ಅನ್ನೋದನ್ನ ಪತ್ರದ ಮೂಲಕ ಸ್ಪಷ್ಟವಾಗಿ ಹೇಳಿದ್ದೇನೆ ಅಂತಾ ತಿಳಿಸಿದ್ದಾರೆ.
Advertisement
ಕಾಗೋಡು ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇದೆ. ಎಷ್ಟೋ ಬಾರಿ ಕೆಪಿಸಿಸಿ ಅಧ್ಯಕ್ಷರ ಮೂಗಿನ ನೇರದಲ್ಲಿ ಗುಂಪುಗಾರಿಕೆ ನಡೆದಿದೆ. ನಾನು ಕಾಂಗ್ರೆಸ್ ಬಿಡಲು ಕೆಲವರು ಕಾರಣರಾಗಿದ್ದಾರೆ ಅಂತಾ ಹೇಳಿದ ಕುಮಾರ್ ಬಂಗಾರಪ್ಪ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ರು. ಜಿಲ್ಲಾ ಸಮಸ್ಯೆಗಳ ಬಗ್ಗೆ ಜಿಲ್ಲಾಮಂತ್ರಿ ಬಳಿ, ಕೆಪಿಸಿಸಿ ಬಳಿ, ಎಐಸಿಸಿ ಬಳಿಯೂ ತಿಳಿಸಿದ್ದೇನೆ. ಆದ್ರೆ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾಯಕತ್ವ ವಿಚಾರದಲ್ಲಿ ಶಾಂತವೇರಿ ಗೋಪಾಲಗೌಡ ಅವರ ಕಾಲದಲ್ಲಿ ಆದ ಘಟನೆಯ ಕಾರಣಕ್ಕಾಗಿ ವೈರತ್ವವನ್ನು ಈಗಲೂ ಮುಂದುವರೆಸಲಾಗಿದೆ. ಹಲವು ವರ್ಷಗಳ ಕಾಲವಾದರೂ ಆ ಹಳೆಯ ದ್ವೇಷವನ್ನೇ ಕಾಗೋಡು ಮುಂದುವರೆಸಿದ್ದಾರೆ ಅಂತಾ ಕಿಡಿಕಾರಿದ್ರು.
Advertisement
ಡೀಲರ್ಸ್ ಬೇಕು: ಕಾಂಗ್ರೆಸ್‍ಗೆ ಈಗ ಕೇವಲ ಮ್ಯಾನೇಜರ್ಸ್, ದಳ್ಳಾಳಿಗಳು ಬೇಕು, ಡೀಲರ್ಸ್‍ಗಳು ಬೇಕು. ಆದ್ರೆ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು, ಅನುಭವಿಗಳು ಮಾತ್ರ ಬೇಕಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್‍ಗೆ ಈಗ ನಾಯಕರು ಬೇಕಿಲ್ಲ, ಮ್ಯಾನೇಜರ್ಸ್ ಬೇಕು ಎಂದು ಅವತ್ತು ಎಸ್‍ಎಂ ಕೃಷ್ಣ ಹೇಳಿರೋದು ಅಕ್ಷರಶಃ ಸತ್ಯ ಅಂತಾ ಕುಮಾರ್ ಬಂಗಾರಪ್ಪ ಹೇಳುವ ಮೂಲಕ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಟಿಕೆಟ್‍ಗೆ ಡಿಮ್ಯಾಂಡ್ ಇಲ್ಲ: ಈ ಹಿಂದೆ ನಾನು ಬಿಜೆಪಿ ಹಾಗೂ ಪ್ರಧಾನಿಯನ್ನು ವಿರೋಧ ಮಾಡಿದ್ದೇನೆ. ಆದರೆ ಈಗ ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಉತ್ತಮ ಸರ್ಕಾರ ತರಲು ಬಿಜೆಪಿ ಸೇರಲು ತೀರ್ಮಾನಿಸಿದ್ದೇನೆ. ಯಾವುದೇ ಟಿಕೆಟ್ ಗೆ ಡಿಮ್ಯಾಂಡ್ ಇಡದೇ ಬಿಜೆಪಿ ಕಾರ್ಯಕರ್ತನಾಗಿ ಸೇರಿಕೊಳ್ಳಲು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಸುಭದ್ರ ಸರ್ಕಾರ ತರುವ ಉದ್ದೇಶದಿಂದ ಕಾರ್ಯಕರ್ತರು, ಅಭಿಮಾನಿಗಳ ಅಭಿಪ್ರಾಯದಂತೆ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದರು.
Advertisement
ಕೈಗೆ ಕೈ ನಾಯಕರೇ ಶತ್ರು: 1996 ರಲ್ಲಿ ನಾನು ಕಾಂಗ್ರೆಸ್ ಸೇರಿದ್ದೆ. 20 ವರ್ಷ ಕಾಂಗ್ರೆಸ್ ನಲ್ಲಿದ್ದು ಈಗ ಬಿಡುವುದು ಬೇಸರ ಆಗುತ್ತಿದೆ. ಭವಿಷ್ಯದ ಸಮಾಜದ ಹಿತ ದೃಷ್ಠಿಯಿಂದ ಒಳ್ಳೆಯದಾಗುತ್ತದೆ ಎಂಬ ಸಂತಸವೂ ಇದೆ. ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗುವಂತೆ ಕಾಂಗ್ರೆಸ್‍ನವರೇ ನೊಡಿಕೊಳ್ಳುತ್ತಾರೆ. ಶಿವಮೊಗ್ಗ, ಉತ್ತರ ಕನ್ನಡ, ಮಂಗಳೂರಿನಲ್ಲಿ ಈ ರೀತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಸಹೋದರ ಮಧು ಬಂಗಾರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಅಭಿವೃದ್ಧಿ ರಾಜಕಾರಣ ಬೇಕು: ಎಮೋಷನಲ್ ರಾಜಕಾರಣ ಜನರಿಗೆ ಈಗ ಬೇಕಿಲ್ಲ. ಅಭಿವೃದ್ಧಿ ಪರ ರಾಜಕಾರಣವನ್ನು ಯುವ ಮತದಾರರು ಬಯಸುತ್ತಿದ್ದಾರೆ. ನಮ್ಮ ತಂದೆ ಸಾವೀಗೀಡಾದರು ಎಂದು ಅವರ ಸಾವನ್ನು ನಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ನಮ್ಮ ನಾಡಿಗೆ ಮಾಡುವ ದ್ರೋಹ ಎಂದರು.
ಹಿಂದೆಯೂ ಬಿಜೆಪಿಗೆ ಸೇರ್ಪಡೆಯಾಗಿದ್ರು: ಈ ಹಿಂದೆ ಬಂಗಾರಪ್ಪ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಕುಮಾರ್ ಬಂಗಾರಪ್ಪ ಕೂಡ ಬಿಜೆಪಿ ಸೇರಿದ್ದರು. ಆದರೆ, ಕೆಲವೇ ದಿನಗಳಲ್ಲಿ ಬಿಜೆಪಿಯಲ್ಲಿ ಉಸಿರು ಕಟ್ಟುವ ವಾತಾವರಣ ಇದೆಯೆಂದು ಹೇಳಿ ಮತ್ತೆ ಕಾಂಗ್ರೆಸ್ ಸೇರಿದ್ದರು. ಇದೀಗ ಮತ್ತೆ ಬಿಜೆಪಿ ಸೇರಲು ಕುಮಾರ್ ಬಂಗಾರಪ್ಪ ಮುಂದಾಗಿದ್ದಾರೆ.