ಬೆಂಗಳೂರು: ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ (Kumar Bangarappa) ನಿವಾಸಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಅಭಿಮಾನಿಗಳು ಇಂದು ಮುತ್ತಿಗೆ ಹಾಕಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ರಾಜ್ ಕುಮಾರ್ ಕುಟುಂಬದ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅದು ನಮಗೆ ನೋವಾಗಿದೆ ಅವರನ್ನ ಹೊರಗೆ ಕರೆಸಿ ಕ್ಷಮೆ ಕೇಳುವಂತೆ ಆಗ್ರಹಿಸಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಸದಾಶಿವನಗರದಲ್ಲಿರುವ ಕುಮಾರ್ ಬಂಗಾರಪ್ಪ ಮನೆ ಗೇಟ್ ಒಳಗೆ ನುಗ್ಗಿ ಕುಮಾರ್ ಬಂಗಾರಪ್ಪ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಶಿವಣ್ಣ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಇಂದಿನಿಂದ ಜೂನ್ 12 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆ
ಮನೆ ಬಾಗಿಲಿನಿಂದ ಹೊರ ಹೋಗುವಂತೆ ಪೊಲೀಸರು ನಟನ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು. ಬಳಿಕ ಕುಮಾರ್ ಬಂಗಾರಪ್ಪ ನಿವಾಸಕ್ಕೆ ಕೆಎಸ್ ಆರ್ ಪಿ ತುಕಡಿ ಆಗಮಿಸಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇನ್ನು ಕುಮಾರ್ ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಓಡಿ ಹೋಗ್ತಿದ್ದ ಪ್ರತಿಭಟನಾಕಾರರನ್ನ ಹಿಡಿದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪಾರ್ಕ್ ಸುತ್ತಮುತ್ತ ನಿಂತಿದ್ದ ಪ್ರತಿಭಟನಾಕಾರರನ್ನ ಕೂಡ ವಶಕ್ಕೆ ಪಡೆಯಲಾಗಿದೆ.
ಅಷ್ಟಕ್ಕೂ ಕುಮಾರ್ ಬಂಗಾರಪ್ಪ ಪೋಸ್ಟ್ ಮಾಡಿದ್ದೇನು..?: ತಮ್ಮ ಸಹೋದರ ಮಧು ಬಂಗಾರಪ್ಪ, ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಟೀಕಿಸಿರುವ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಶಿವರಾಜ್ ಕುಮಾರ್ ಅವರ ಬಗ್ಗೆ ಕೇವಲವಾಗಿ ಬರೆದಿದ್ದರು. ಶಿವರಾಜ್ ಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು ಎಂದು ಲಘುವಾಗಿ ಮಾತನಾಡಿದ್ದರು.
ನನ್ನ ತಂಗಿ (ಗೀತಾ ಶಿವರಾಜ್ ಕುಮಾರ್) ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೊಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು ಎಂದಿದ್ದರು.