Bengaluru CityKarnatakaLatestMain Post

ಸಿದ್ದರಾಮಯ್ಯ ಭೇಟಿಯಾದ ಬಂಗಾರಪ್ಪ ಪುತ್ರರು- ಕುತೂಹಲ ಮೂಡಿಸಿದ ನಾಯಕರ ಭೇಟಿ

-ಡಿಕೆಶಿ ಪರ ಸಾಫ್ಟ್ ಕಾರ್ನರ್ ತೋರಿದ ಕುಮಾರ್ ಬಂಗಾರಪ್ಪ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಬಂಗಾರಪ್ಪನವರ ಪುತ್ರರಾದ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿ ರಾಜಕೀಯ ರಂಗದಲ್ಲಿ ಕುತೂಹಲ ಮೂಡಿಸಿದೆ.

ಶಿವಾನಂದ ಸರ್ಕಲ್‍ನ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ಮಧು ಬಂಗಾರಪ್ಪ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಬಳಿಕ ಕುಮಾರ್ ಬಂಗಾರಪ್ಪ ಆಗಮಿಸಿದರು. ಕುಮಾರ್ ಬಂಗಾರಪ್ಪ ಬಂದ ಕೂಡಲೇ ಮಧು ಬಂಗಾರಪ್ಪ ಸಿದ್ದರಾಮಯ್ಯ ನಿವಾಸದಿಂದ ತೆರಳಿದರು. ಸಿದ್ದರಾಮಯ್ಯ ನಿವಾಸದ ಹೊರ ಭಾಗದಲ್ಲಿ ನಿಂತಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಮಧು ಬಂಗಾರಪ್ಪ ಹೊರಟು ಹೋದರು. ಇದನ್ನೂ ಓದಿ: ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು- ಸೊಗಡು ಶಿವಣ್ಣ ವಿರುದ್ಧ ಡಿಕೆಶಿ ಕಿಡಿ

ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ, ನನ್ನ ಮಗಳ ಮದುವೆ ನವೆಂಬರ್ 10ಕ್ಕೆ ಇದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಆಮಂತ್ರಣ ಕೊಡಲು ಬಂದಿದ್ದೆ. ಈ ವೇಳೆ ನನ್ನ ತಮ್ಮ ಇದ್ದ ನೋಡಿ ಸಂತೋಷ ಆಯ್ತು. ನಾವು ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ನನ್ನ ಮಗಳ ಮದುವೆಗೆ ಆಹ್ವಾನ ನೀಡಲು ಬಂದಿದ್ದೆ ಅಷ್ಟೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ. ಕಾಂಗ್ರೆಸ್ ಸೇರ್ತಾರೆ ಅನ್ನೋದು ಸುಳ್ಳು ಸುದ್ದಿ. ನನ್ನನ್ನು ಯಾವ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿಲ್ಲ, ನಾನು ಕಾಂಗ್ರೆಸ್ ಸೇರಲ್ಲ. ನಾನು ಬಿಜೆಪಿಯಲ್ಲಿ ಇರುತ್ತೇನೆ. ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತೀನಿ ಬಿಜೆಪಿ ಬಿಟ್ಟು ನಾನು ಕಾಂಗ್ರೆಸ್ ಸೇರ್ತೀನಿ ಅನ್ನೋದು ಸತ್ಯಕ್ಕೆ ದೂರವಾರ ಮಾತು ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿ, ಈಗಾಗಲೇ ನಮ್ಮ ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲಾಗಿದೆ. ನಮ್ಮ ಜಾತಿ ಕೋಟಾದಲ್ಲೂ ಸುನಿಲ್ ಕುಮಾರ್, ಮತ್ತು ಕೋಟಾ ಶ್ರೀನಿವಾಸ್ ಪೂಜಾರಿಗೆ ಕೊಟ್ಟಿದ್ದಾರೆ. ಹೀಗಾಗಿ ನನಗೆ ಬೇಕು ಅಂತ ನಾನು ಕೇಳುವುದಿಲ್ಲ. ಇರೋ 32 ಸ್ಥಾನದಲ್ಲಿ ಎಲ್ಲರಿಗೂ ಕೊಡೋಕೆ ಸಾಧ್ಯವಿಲ್ಲ. ಹೀಗಾಗಿ ಇರೋ ಸ್ಥಾನವನ್ನು ನಾಯಕರು ಹಂಚಿಕೆ ಮಾಡ್ತಾರೆ ಎಂದು ಪರೋಕ್ಷವಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಸಲೀಂ 6 ವರ್ಷ ಉಚ್ಚಾಟನೆ- ಉಗ್ರಪ್ಪಗೆ ಶೋಕಾಸ್‌ ನೋಟಿಸ್‌ ಜಾರಿ

ಡಿಕೆ ಶಿವಕುಮಾರ್ ವಿರುದ್ಧ ಅವ್ರ ಪಕ್ಷದವರೇ ಆರೋಪ ಮಾಡಿದ ವಿಚಾರವಾಗಿ, ಶಿವಕುಮಾರ್ ಭ್ರಷ್ಟಾಚಾರ ಮಾಡಿದ್ದಾರೋ, ಇಲ್ವೋ, ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ ಮುಖಂಡರು ಹಾಗೇ ಮಾತನಾಡಬಾರದಿತ್ತು. ವೇದಿಕೆಗಳಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಈಗ ಕಾಂಗ್ರೆಸ್ ಅವರು ನಮಗೆ ಅಸ್ತ್ರ ಕೊಟ್ಟಿದ್ದಾರೆ. ನಮ್ಮ ಬಳಿ ಬಿಲ್ಲಿದೆ. ನಾವು ಬಾಣ ಪ್ರಯೋಗ ಮಾಡ್ತೀವಿ ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *

Back to top button