Latest

ಮತ್ತೆ ವಿಶ್ವಮಟ್ಟದಲ್ಲಿ ಪಾಕ್‍ಗೆ ಭಾರೀ ಮುಖಭಂಗ: ಭಾರತ ಮುಂದೆ ಏನು ಮಾಡಬೇಕು?

Published

on

Share this

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಭಾರತದ ಎದುರು ಮತ್ತೊಂದು ಮುಖಭಂಗ ಅನುಭವಿಸಿದೆ. ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್‍ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಗೆ ನೆದರ್‍ಲ್ಯಾಂಡ್‍ನ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಪಾಕ್ ಸೇನಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಇದೇ ಸೋಮವಾರ ಭಾರತ ನ್ಯಾಯಾಲಯದ ಮೊರೆ ಹೋಗಿತ್ತು. ಒಂದೇ ದಿನದಲ್ಲಿ ತಡೆಯಾಜ್ಞೆ ತರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿದ್ದು, ಪಾಕಿಸ್ತಾನ ವಿರುದ್ಧ ಅತೀ ದೊಡ್ಡ ರಾಜತಾಂತ್ರಿಕ ಗೆಲುವೆಂದೇ ಬಣ್ಣಿಸಲಾಗುತ್ತಿದೆ.

ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಮುರಿದಿದ್ದು, ನೌಕಾಪಡೆಯಿಂದ ನಿವೃತ್ತರಾದ ಬಳಿಕ ಜಾಧವ್ ಅವರು ಇರಾನ್‍ನಲ್ಲಿ ಉದ್ಯಮ ನಡೆಸುತ್ತಿದ್ದರು. ಈ ವೇಳೆ ಪಾಕಿಸ್ತಾನ ಅಪಹರಿಸಿತ್ತು. ಆದರೆ, 2016ರ ಮಾರ್ಚ್ 3ರಂದು ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿದೆ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ನೇತೃತ್ವದ ವಕೀಲರ ತಂಡವು ಮೇ 8ರಂದು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ಪರವಾಗಿ ಅರ್ಜಿ ಸಲ್ಲಿಸಿತ್ತು.

ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.

ಗೂಢಚರ್ಯೆ ಆರೋಪ ಹೊರಿಸಿ ಕಳೆದ ವರ್ಷದ ಮಾರ್ಚ್ 3ರಂದು ಬಲೂಚಿಸ್ತಾನದಲ್ಲಿ ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನ್ಯಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್‍ನಲ್ಲಿ ಭಾರತ ಮಂಡಿಸಿದೆ. ನ್ಯಾಯಾಲಯದ ತಡೆಯಾಜ್ಞೆ ಹೊರಬೀಳುತ್ತಲೇ ಟ್ವೀಟ್ ಮಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕುಲಭೂಷಣ್ ತಾಯಿಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ.

ಭಾರತದ ಮುಂದಿನ ನಡೆ ಏನು?: ನೌಕಾಪಡೆಯಲ್ಲಿ ನಿವೃತ್ತರಾದ ಬಳಿಕ ಇರಾನ್‍ನಲ್ಲಿ ಕುಲಭೂಷಣ್ ಉದ್ಯಮದಲ್ಲಿ ತೊಡಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳನ್ನು ನೀಡಬೇಕು. ಪ್ರಕರಣದ ವಿಚಾರಣೆಯಲ್ಲಿ ಪಾಕಿಸ್ತಾನ ಉಲ್ಲಂಘಿಸಿರುವ ಕಾನೂನಿನ ಅಂಶಗಳನ್ನು ನ್ಯಾಯಾಲಯಕ್ಕೆ ವಿವರಿಸಬೇಕು.

ಪಾಕ್ ಹೇಳಿದ್ದು ಏನು?: ಭಾರತೀಯ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿರುವ ಕೂಲಭೂಷಣ್ ಯಾದವ್ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದಾಗ ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಬಂಧಿಸಲಾಗಿದೆ. ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ ಜಾಧವ್ ತಪ್ಪೊಪ್ಪಿ ಕೊಂಡಿದ್ದಾರೆ. ಹೀಗಾಗಿ ಪಾಕಿಸ್ತಾನ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

Click to comment

Leave a Reply

Your email address will not be published. Required fields are marked *

Advertisement
Advertisement