ಕುಲಭೂಷನ್ ಜಾಧವ್ ಪ್ರಕರಣ- ಭಾರತದ ವಕೀಲರ ಶುಲ್ಕ 1 ರೂ., ಪಾಕ್ ವ್ಯಯ ಮಾಡಿದ್ದು 20 ಕೋಟಿಗೂ ಅಧಿಕ

Public TV
2 Min Read
kulbhushan jadhav lawyer

ನವದೆಹಲಿ: ಹೇಗ್‍ನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ಸಾರ್ವಜನಿಕ ವಿಚಾರಣೆ ನಡೆದು ತೀರ್ಪು ನೀಡಲಾಗಿದೆ. ಈ ಸಂಬಂಧ ಭಾರತದ ಪರವಿದ್ದ ಹಿರಿಯ ವಕೀಲ ಹರೀಶ್ ಸಾಲ್ವೆ ಶುಲ್ಕವಾಗಿ ಕೇವಲ 1 ರೂ. ಪಡೆದರೆ, ಪಾಕ್ ಪರ ವಕೀಲರು 20 ಕೋಟಿ ರೂ.ಗೂ ಅಧಿಕ ಶುಲ್ಕವನ್ನು ಪಡೆದಿದ್ದಾರೆ.

kulbhushan jadhav and harish salve

ವಕೀಲ ಹರೀಶ್ ಸಾಲ್ವೆ ಅವರು ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರವಾಗಿ ವಾದ ಮಂಡಿಸಿ ಜಯಗಳಿಸಿದ್ದಾರೆ. ಆದರೆ ಅವರು ಶುಲ್ಕವಾಗಿ ಕೇವಲ 1 ರೂ. ಮಾತ್ರ ಪಡೆದಿದ್ದಾರೆ. ಪಾಕ್ ಈ ಪ್ರಕರಣವನ್ನು ಗೆಲ್ಲುವ ನಿಟ್ಟಿನಲ್ಲಿ ಅವರ ಪರ ವಕೀಲ ಖವಾರ್ ಖುರೇಷಿ ಅವರಿಗೆ ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ಶುಲ್ಕವಾಗಿ ನೀಡಿದೆ. ಇದನ್ನೂ ಓದಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಐಸಿಜೆ ತೀರ್ಪನ್ನು ಶ್ಲಾಘಿಸಿದ ಪಾಕ್ ಪ್ರಧಾನಿ

ICJ

ಈ ಬಗ್ಗೆ ಕಳೆದ ವರ್ಷ ರಾಷ್ಟ್ರೀಯ ಸಂಸತ್ತಿನಲ್ಲಿ ಪಾಕಿಸ್ತಾನ ನೀಡಿರುವ ದೇಶದ ಬಜೆಟ್ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಯುಕೆ ಮೂಲದ ನ್ಯಾಯವಾದಿ ಖವಾರ್ ಖುರೇಷಿಗೆ ಪಾಕ್ 20 ಕೋಟಿಗೂ ಅಧಿಕ ಹಣವನ್ನು ಶುಲ್ಕದಲ್ಲಿ ನೀಡಿದೆ ಎಂದು ನಮೂದಿಸಿದೆ. ಖುರೇಷಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾನೂನು ಪದವೀಧರರಾಗಿದ್ದು, ಐಸಿಜೆಯಲ್ಲಿ ಪ್ರಕರಣ ಸಂಬಂಧ ಹೋರಾಡುತ್ತಿರುವ ಅತ್ಯಂತ ಕಿರಿಯ ವಕೀಲ ಎಂದು ಹೇಳಲಾಗಿದೆ.

harish salve in ICJ Hegue

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ವಕೀಲ ಹರೀಶ್ ಸಾಲ್ವೆ ಅವರು ಪಡೆದ ಶುಲ್ಕದ ಬಗ್ಗೆ ಮೇ 15, 2017 ರಂದು ಮಾಡಿದ ಟ್ವೀಟ್‍ನಲ್ಲಿ ತಿಳಿಸಿದ್ದರು. ಸಾಲ್ವೆ ಅವರು ಹೇಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಕೇವಲ 1 ರೂ.ಗಳನ್ನು ಪಡೆದಿದ್ದಾರೆ ಎಂದು ಹೇಳಿದ್ದರು. ಸಾಮಾನ್ಯವಾಗಿ ಹರೀಶ್ ಸಾಲ್ವೆ ಅವರು 30 ಲಕ್ಷ ರೂ. ಅನ್ನು ಒಂದು ದಿನದ ವಿಚಾರಣೆಗಾಗಿ ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ.

Kulbhushan Pakistan Khawar Qureshi

ಏನಿದು ಪ್ರಕರಣ?
ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2017ರ ಏಪ್ರಿಲ್ ನಲ್ಲಿ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

kulabhushan jadhav

ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಕೂಲಭೂಷಣ್ ಜಾಧವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು. ಅಲ್ಲದೆ 2017ರಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.

INDIA PAK

ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ಹೀಗಾಗಿ ಭಾರತ ಮೇ 2017ರಂದು ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ 10 ಸದಸ್ಯರುಳ್ಳ ನ್ಯಾಯಪೀಠ 18 ಮೇ 2017ರಂದು ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿತ್ತು.

ICJ 1

ಭಾರತ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದು, ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್‍ನಲ್ಲಿ ಭಾರತ ಮಂಡಿಸಿತ್ತು.

Share This Article