ಮಂಗಳೂರು: ಮಹಾಪ್ರವಾಹಕ್ಕೆ ರಾಜ್ಯದ ಹಲವು ಜಿಲ್ಲೆಗಳು ತತ್ತರಿಸಿ ಹೋಗಿವೆ. ಪ್ರವಾಹ ಸಂತ್ರಸ್ತರು ಮನೆಮಠ, ಜಮೀನು, ಆಸ್ತಿಪಾಸ್ತಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಮಧ್ಯೆ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಕುಕ್ಕೆ ಸುಬ್ರಹ್ಮಣ್ಯ ದೇಗುಲ ನಿರ್ಧರಿಸಿದ್ದು, ಸುಮಾರು 1 ಕೋಟಿ ರೂಪಾಯಿ ಹಣವನ್ನು ದೇಣಿಗೆ ನೀಡಲು ಮುಂದಾಗಿದೆ.
ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ಹಣ ದೇಣಿಗೆ ನೀಡುವುದರ ಜೊತೆಗೆ 583 ಸೀರೆ, 1050 ಪಂಚೆ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಸಂತ್ರಸ್ತರಿಗೆ ದೇವಸ್ಥಾನದಿಂದ ನೀಡಲಾಗುತ್ತಿದೆ. ಈ ದೇಣಿಗೆ ಹಣವನ್ನು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ನೆರೆ ಪರಿಹಾರ ನಿಧಿಗೆ ನೀಡಲು ದೇವಸ್ಥಾನ ಕಮಿಟಿ ತೀರ್ಮಾನಿಸಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.
Advertisement
Advertisement
ಈ ಹಿಂದೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿರುವುದು ಮಾತ್ರವಲ್ಲದೆ, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮಳೆಯ ಅಬ್ಬರ ಹಾಗೂ ಪ್ರವಾಹ ಕಡಿಮೆಯಾದ ಬಳಿಕ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿಕೊಡುವುದಾಗಿ ಹೇಳಿದ್ದರು.
Advertisement
ಮನೆ ನಿರ್ಮಿಸಿಕೊಡಲು ಸುಮಾರು 10 ಕೋಟಿ ರೂ. ಮೀಸಲಿರಿಸಿದ್ದೇವೆ. ಕಳೆದ ಬಾರಿ ಕೊಡಗಿನಲ್ಲಿ ಪ್ರವಾಹ ಸಂಭವಿಸಿದಾಗ 2,500 ಮನೆಗಳನ್ನು ನಿರ್ಮಿಸಿದ್ದೆವು. ಆಂಧ್ರದಲ್ಲಿ ಪ್ರವಾಹ ಸಂಭವಿಸಿದಾಗ 250 ಮನೆ ನಿರ್ಮಾಣ ಮಾಡಿದ್ದೇವು. ಹೀಗೆ ಹಾನಿಯ ಪ್ರಮಾಣವನ್ನು ನೋಡಿಕೊಂಡು ಅಗತ್ಯವಿದ್ದಷ್ಟು ಮನೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಮ್ಮ ಗುತ್ತಿಗೆದಾರ ರಮೇಶ್ ರೆಡ್ಡಿ ಅವರ ತಂಡ ಸಿದ್ಧವಾಗಿದೆ. ಅವರ ನೇತೃತ್ವದಲ್ಲೇ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದ್ದರು.