– ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ
ಮಂಗಳೂರು: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ದ.ಕ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ (Kukke Subrahmanya) ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.
ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ರಾತ್ರಿ ಸುರಿದ ನಿರಂತರ ಮಳೆಗೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕುಮಾರಧಾರ (Kumaradhara River) ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಿದೆ. ಕುಮಾರಧಾರ ಉಪನದಿ ದರ್ಪಣ ತೀರ್ಥ ಕೂಡ ತುಂಬಿ ಹರಿಯುತ್ತಿದೆ.
ತುಂಬಿ ಹರಿಯುತ್ತಿರುವುದರಿಂದ ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ದೇಗುಲಕ್ಕೆ ಬರುವ ಭಕ್ತರು ನದಿ ದಡದಲ್ಲೇ ತೀರ್ಥಸ್ನಾನ ಮಾಡುತ್ತಿದ್ದಾರೆ. ನದಿತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿ, ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ
ಮಣ್ಣಿನ ದಿಬ್ಬ ಕುಸಿದು ಮಕ್ಕಳಿಬ್ಬರು ಪಾರು: ಇತ್ತ ಪುತ್ತೂರಿನಲ್ಲಿ ಮನೆ ಮೇಲೆ ಮಣ್ಣಿನ ದಿಬ್ಬ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಪಾರಾದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಮಜೀದ್ ಎಂಬವರ ಮನೆಗೆ ಪಕ್ಕದ ಮಣ್ಣಿನ ದಿಬ್ಬ ಕುಸಿದು ಬಿದ್ದಿದೆ.
ಮಜೀದ್ ಮತ್ತು ಇಬ್ಬರು ಮಕ್ಕಳ ಮಲಗಿದ್ದ ಕೊಠಡಿ ಮೇಲೆ ಮಣ್ಣು ಬಿದ್ದ ಪರಿಣಾಮ ಮನೆಯ ಅರ್ಧ ಭಾಗ ಕುಸಿದು ಬಿದ್ದಿದೆ. ಈ ವೇಳೆ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿಕೊಂಡಿದ್ದು ತಕ್ಷಣ ಎಚ್ಚೆತ್ತ ಮಜೀದ್ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ಮಾಡಿದ್ದು,ನಗರಸಭೆ ಮತ್ತು ಸ್ಥಳೀಯರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ.