ಮಂಗಳೂರು: ಆಂಧ್ರಪ್ರದೇಶದ ಇಂಡಿಯನ್ ಮ್ಯಾಜಿಕ್ ಅಸೋಶಿಯೇಶನ್ (ಐಎಂಎ) ಸಂಸ್ಥೆಯು ಕರ್ನಾಟಕದ ಜಾದೂ ಕಲಾವಿದ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರಿಗೆ ಪ್ರತಿಷ್ಟಿತ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ. ಕುದ್ರೋಳಿ ಗಣೇಶ್ ಅವರು ಜಾದೂ ರಂಗದಲ್ಲಿ ಮಾಡಿರುವ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿಯ ಸಾಧನೆಗಾಗಿ ಈ ಪ್ರಶಸ್ತಿ ಸಂದಾಯವಾಗಿದೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಜಾದೂ ದಿನಾಚರಣೆಯ ನೆನಪಿಗಾಗಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿಶಾಖಪಟ್ಟಣದ ಲೋಕಸಭಾ ಸದಸ್ಯ ಭರತ್ ಮುತ್ತುಕುಮುಲಿ ಅವರು ಕುದ್ರೋಳಿ ಗಣೇಶ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಐಎಂಎ ಸಂಸ್ಥೆಯ ಅಧ್ಯಕ್ಷ ಖ್ಯಾತ ಜಾದೂಗಾರ ಬಿ.ಎಸ್.ರೆಡ್ಡಿ ಉಪಸ್ಥಿತರಿದ್ದರು.
ಇಂಡಿಯನ್ ಮ್ಯಾಜಿಕ್ ಅಸೋಸಿಯೇಶನ್ ಸಂಸ್ಥೆಯು ತನ್ನ ದಶಮಾನೋತ್ಸದ ಅಂಗವಾಗಿ ಭಾರತದ ಅಗ್ರಗಣ್ಯ ಜಾದೂಗಾರ ಪಿ.ಸಿ.ಸೊರ್ಕಾರ್ ಜೂನಿಯರ್ ಸೇರಿದಂತೆ ದೇಶ-ವಿದೇಶದ ಹತ್ತು ಜಾದೂ ಸಾಧಕರಿಗೆ ಪ್ರಶಸ್ತಿಯನ್ನು ಕೊಡಮಾಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುದ್ರೋಳಿ ಗಣೇಶ್, ಬದಲಾಗುತ್ತಿರುವ ಅಭಿರುಚಿಗೆ ಹೊಂದುವಂತೆ ಪ್ರದರ್ಶನದಲ್ಲಿ ಹೊಸತನವನ್ನು ಜೋಡಿಸಿಕೊಳ್ಳೋಣ ಎಂದು ಭಾರತೀಯ ಜಾದೂಗಾರರಿಗೆ ಕರೆ ನೀಡಿದರು. ಜಾದೂ ಕಲೆಯ ಅಭಿವೃದ್ಧಿಗಾಗಿ ಜಾದೂ ಕಲೆಗೆ ಸಾಂಸ್ಥಿಕ ರೂಪ ದೊರೆಯಬೇಕಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕುದ್ರೋಳಿ ಗಣೇಶ್, ತಾವು ಮುಂದಾಳತ್ವವನ್ನು ವಹಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಜಾದೂಗಾರ ಪಿ.ಸಿ.ಸೊರ್ಕಾರ್ ಅವರಿಗೆ ವಿನಂತಿಸಿದರು.
ಕುದ್ರೋಳಿ ಗಣೇಶ್ ಅವರು ಮೂವತ್ತಕ್ಕೂ ಅಧಿಕ ವರ್ಷಗಳಿಂದ ಜಾದೂರಂಗದಲ್ಲಿದ್ದು, ದೇಶದಾದ್ಯಂತ ಹಾಗೂ ವಿದೇಶದ 15 ರಾಷ್ಟ್ರಗಳಲ್ಲಿ 2,300 ಕ್ಕೂ ಹೆಚ್ಚು ಜಾದೂ ಪ್ರದರ್ಶನ ನೀಡಿದ್ದಾರೆ. ವಿವಿಧ ಜಾದೂ ಸ್ಪರ್ಧೆಗಳಲ್ಲಿ ಭಾಗವಹಿಸಿ 11 ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜಾದೂ, ಜಾನಪದ, ರಂಗಭೂಮಿ, ಸಂಗೀತಗಳ ಸಮ್ಮಿಳನದ ನವರಸಪೂರ್ಣ ಜಾದೂ ಶೈಲಿಯನ್ನು ಹುಟ್ಟುಹಾಕಿದ್ದಾರೆ. ತುಳುನಾಡು ಜಾದೂ, ತುಳುನಾಡು ತುಡರ್ ಚೆಂಡು, ಹರಿಕಥೆ ಜಾದೂ, ನವದುರ್ಗಾ ವಿಸ್ಮಯ, ಸ್ವಚ್ಛತೆಗಾಗಿ ಜಾದೂ, ಶಿಕ್ಷಣಕ್ಕಾಗಿ ಜಾದೂ, ಮೈಂಡ್ ಮ್ಯಾಜಿಕ್ ಮುಂತಾದ ನವನವೀನ ಜಾದೂ ಪ್ರಯೋಗಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ.