ಕಣ್ಮನ ಸೆಳೆಯುವ ಕುದ್ರೋಳಿ ದಸರಾ ವೈಭವ

Public TV
3 Min Read
Mangaluru Dasara 3

ರ್ನಾಟಕದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನಾಡಹಬ್ಬ ದಸರವು ಪ್ರಮುಖವಾದದ್ದು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ದಸರವನ್ನೂ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದಲ್ಲಿ (Kudroli Shri Gokarnanatheshwara Kshetra) ದಸರಾ ವೈಭವದಿಂದ ನಡೆಯುತ್ತದೆ. ಇದನ್ನು ವಿಜಯದಶಮಿ, ನವರಾತ್ರಿ ಹಬ್ಬ ಎಂತಲೂ ಕರೆಯುತ್ತಾರೆ.

ಹತ್ತು ದಿನಗಳ ಕಾಲ ನಗರವನ್ನು ವಿವಿಧ ಬಗೆಯ ಬಣ್ಣ ಬಣ್ಣದ ಬಲ್ಬ್, ದೀಪಗಳಿಂದ ಅಲಂಕರಿಸುತ್ತಾರೆ. ಇದನ್ನು ನೋಡೋದೆ ಕಣ್ಣಗಳಿಗೆ ಒಂದು ಹಬ್ಬ. ನಾನಾ ರೀತಿಯ ವೇಷಗಳಿಂದ ಮನರಂಜನೆ ನೀಡುವ ಸಿಂಹ ಮತ್ತು ಕರಡಿ ಹುಲಿ ಕುಣಿತ ಮುಂತಾದವುಗಳನ್ನು ನಾವಿಲ್ಲಿ ಕಾಣಬಹುದು. ಒಟ್ಟಿನಲ್ಲಿ ಇಡೀ ಮಂಗಳೂರು ನಗರವೇ ಬೆಳಕಿನಲ್ಲಿ ಕಂಗೊಳಿಸುತ್ತಿರುತ್ತದೆ.

MANGALURU DASARA 1

ಬಿ ಆರ್ ಕರ್ಕೇರ ಅವರು ಮಂಗಳೂರು ದಸರವನ್ನು ಮೊದಲು ಪ್ರಾರಂಭಿಸಿದರು. ಮಂಗಳೂರಿನ (Mangaluru) ಗೋಕರ್ನಾಥೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಬಹಳ ವಿಜೃಂಭಣೆಯಿಂದ ಆಚರಿಸುವ ಉತ್ಸವ. ಅದೇ ಸಡಗರದಿಂದ ಆಚರಿಸುವ ಮತ್ತೊಂದು ಉತ್ಸವ ಅಂದರೆ ನವರಾತ್ರಿ. ನವರಾತ್ರಿಯ ಸಂದರ್ಭದಲ್ಲಿ ಶಾರದಾದೇವಿ ಸೇರಿದಂತೆ ಹಲವು ಮೂರ್ತಿಗಳನ್ನು ವೈದಿಕ ಸಾಂಪ್ರದಾಯದಂತೆ ಪ್ರತಿಷ್ಠಾಪಿಸಲಾಗುತ್ತದೆ. 9 ದಿನಗಳ ಕಾಲ ಭಕ್ತಿಯಿಂದ ಪೂಜಿಸಲಾಗುತ್ತದೆ. ನವ ದುರ್ಗೆಯರ ಜೊತೆಗೆ ಮಹಾಗಣಪತಿ ಮತ್ತು ಶಾರದಾದೇವಿಗೂ ವಿಶೇಷ ಪೂಜೆ ನಡೆಯುತ್ತದೆ. ಮಹಾಗಣಪತಿ ಮತ್ತು ಶಾರದೆ ಹಾಗೂ ನವದುರ್ಗೆಯರಾದ ಆದಿಶಕ್ತಿ, ಶೈಲ ಪುತ್ರಿ, ಸ್ಕಂದಾಮಾತಾ, ಕತ್ಯಾಯನಿ, ಕಾಳರಾತ್ರಿ, ಮಹಾ ಗೌರಿ ಸಿದ್ಧಿದಾತ್ರಿ, ಬ್ರಹ್ಮಚಾರಿಣಿ ಚಂದ್ರಘಂಟಾ, ಕೂಷ್ಮಂಡಾಯಿನಿ, ದುರ್ಗೆಯರಿಗೆ ವಿಷೇಶ ಪೂಜೆ ನಡೆಯುತ್ತದೆ.

Sharadha Mata 1

ಕುದ್ರೋಳಿ ದಸರಾ (Kudroli Dasara) ಬಂತೆಂದರೆ ಸಾಕು ಊರ ಜನರಿಗೆ ಹಬ್ಬ. ಪರವೂರಿನವರನ್ನು ತನ್ನತ್ತ ಆಕರ್ಷಿಸು ಶಕ್ತಿ ಮಾತೆಗೆ ಇದೆ. ಮಂಗಳ ದೇವಿಯಿಂದ ಮಂಗಳೂರು ಎಂಬ ಹೆಸರು ಬಂದಿದೆ. ಮಂಗಳ ದೇವಿ ದೇವಸ್ಥಾನದಲ್ಲೂ ದಸರವನ್ನು ಆಚರಿಸಲಾಗುತ್ತದೆ. ಜಾನಪದ ಸಂಗೀತ ನಾಟಕ ವಿವಿಧ ವಿಷಯಗಳ ನಾಟಕಗಳು ಮತ್ತು ಭಕ್ತಿ ಗೀತೆಗಳು ಅಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಗಳದೇವಿ ದೇವಸ್ಥಾನವು ಏರ್ಪಡಿಸುತ್ತದೆ. ಮಹಾನವಮಿಯಂದು ಎಲ್ಲಾ ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಸುಂದರವಾಗಿ ಅಲಂಕೃತ ಗೊಂಡ ದೇವಿಯನ್ನು ರಥದ ಮೇಲೆ ಕೂರಿಸಿ ನಂತರ ಭವ್ಯವಾದ ರಥವನ್ನು ಎಳೆಯಲಾಗುತ್ತದೆ. ವಿವಿಧ ದೇವತೆಗಳಿಂದ ಕೂಡಿರುವ ರಥವು ವರ್ಣ ರಂಜಿತವಾಗಿ ಕಾಣುತ್ತದೆ. ಮೆರವಣಿಗೆಯು ಮರ್ನಮಿ ಕಟ್ಟವನ್ನು ತಲುಪಿದ ನಂತರ ಅಲ್ಲಿ ದೇವಿಯನ್ನು ಭಕ್ತಿ ಪೂರ್ವಕವಾಗಿ ಪೂಜಿಸಲಾಗುವುದು.

kudroli dasara

ವಿವಿಧ ಕಲೆಗಳಿಂದ ಮೇಳೈಸುವ ಮೆರವಣಿಗೆ:

ವಿಜಯದಶಮಿಯ ದಿನದಂದು ಸಂಜೆಯ ಹೊತ್ತು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗುತ್ತದೆ. ಮಾರನೆಯ ದಿನ ಮುಂಜಾನೆಯ ಹೊತ್ತಿಗೆ ದೇವಸ್ಥಾನದ ಸಂಕೀರ್ಣದಲ್ಲಿರುವ ಪುಷ್ಕರಣಿಯಲ್ಲಿ ವಿಗ್ರಹಗಳ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತದೆ. ಪೂಜಿಸಿದಂತ ಎಲ್ಲಾ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ಮೆರವಣಿಗೆಯಲ್ಲಿ ಎಲ್ಲಾ ರೀತಿಯ ಕಲಾಪ್ರಕಾರಗಳು ಮೇಳೈಸುತ್ತವೆ. ಚಂಡೆ ವಾದನ ಬ್ಯಾಂಡ್, ವೈವಿಧ್ಯಮಯ ಅಲಂಕಾರಗಳು, ಜನಪದ ನೃತ್ಯ ಯಕ್ಷಗಾನ ಪಾತ್ರಗಳು, ಡೊಳ್ಳು ಕುಣಿತ, ಹುಲಿಕುಣಿತ ಹೀಗೆ ಎಲ್ಲಾ ಸಾಂಸ್ಕೃತಿಕ ಕಲೆಗಳನ್ನು ನಾವು ಈ ಮೆರವಣಿಗೆಯಲ್ಲಿ ಕಾಣಬಹುದು. ಮೆರವಣಿಗೆಯು ಕುದ್ರೋಳಿಯಿಂದ ಪ್ರಾರಂಭವಾಗಿ ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ ಬಾಗ್, ಕೆಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿಬರುತ್ತದೆ.

 

kudroli dasara 2

ಮಂಗಳೂರು ದಸರವನ್ನು ಮಂಗಳದೇವಿ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಜೋಡುಮುತ್ತು ದೇವಸ್ಥಾನಗಳು ಸೇರಿ ಸಂಭ್ರಮದಿಂದ ಆಯೋಜಿಸುತ್ತದೆ. ಪ್ರಮುಖವಾಗಿ ಶಾರದಾ ಪೂಜೆಯನ್ನು ಆಯೋಜಿಸಲು ವಿವಿಧ ಸಮಿತಿಗಳಿವೆ. ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ ಆಚಾರ್ಯ ಮಠ ಬ್ರಹ್ಮ ವಿದ್ಯಾ ಪ್ರಬೋಧಿನಿ ಶ್ರೀ ಶಾರದಾ ಪೂಜಾ ಮಹೋತ್ಸವ ಜೋಡುಮಠ, ರಥ ಬೀದಿ ಬಾಲಕರ ಶಾರದ ಮಹೋತ್ಸವ ಗೋಕರ್ಣ ಮಠ ಟ್ಯಾಂಕ್ ಕಾಲೋನಿ ಶಾರದ ಮಹೋತ್ಸವ, ವಿಟಿ ರಸ್ತೆ ಬಾಲಕರ ವೃಂದ ಇತ್ಯಾದಿ ಸಮಿತಿಯನ್ನು ಕಾಣಬಹುದಾಗಿದೆ.

kudroli dasara 1

ಮಂಗಳೂರಿನ ಬ್ರಹ್ಮ ವಿದ್ಯಾ ಪ್ರಬೋಧಿನಿ ಜೋಡುಮಠದಲ್ಲೂ ಶ್ರೀ ಶಾರದಾ ಪೂಜೆ ಮಹೋತ್ಸವವು ನವರಾತ್ರಿಯ ಕಾಲದಲ್ಲಿ ಆರೇಳು ದಿನಗಳ ಕಾಲ ಆಚರಿಸಲಾಗುತ್ತದೆ. ಜೋಡು ಮಠದ ಆವರಣದಲ್ಲಿ ಶಾರದಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ಮೂಲ ನಕ್ಷತ್ರದಿಂದ ಶ್ರವಣ ನಕ್ಷತ್ರದವರೆಗೆ ಪೂಜೆ ನಡೆಯುತ್ತದೆ. ದೇವಿಗೆ ವಿವಿಧ ಅಲಂಕಾರದೊಂದಿಗೆ ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ನವರಾತ್ರಿಯ ಏಕದಶಿ ದಿನದಂದು ಶೋಭಾ ಯಾತ್ರೆಯಲ್ಲಿ ನಿಮಜ್ಜನದೊಂದಿಗೆ ಆರಾಧನೆ ಮುಕ್ತಾಯಗೊಳ್ಳುತ್ತದೆ. ಮಂಗಳೂರಿನಲ್ಲಿ ಮೂಲೆಮೂಲೆಯಲ್ಲೂ ಹಬ್ಬದ ವಾತಾವರಣ ಮನೆ ಮಾಡುತ್ತದೆ.

kudroli dasara

ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದಲ್ಲೂ ನವರಾತ್ರಿಯ ಸಮಯದಲ್ಲಿ ಆ ಏಳು ದಿನಗಳ ಕಾಲ ಮಂಗಳೂರು ಶಾರದೋತ್ಸವ, ಶಾರದ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಶಾರದಾ ದೇವಿಯ ವಿಗ್ರಹವನ್ನು ಕಾರ್ ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಸ್ಥಾಪಿಸಲಾಗುತ್ತದೆ. ಭವ್ಯವಾದ ಮೆರವಣಿಗೆಯಲ್ಲಿ ಶಾರದ ದೇವಿಯ ವಿಗ್ರಹವನ್ನು ಮೊದಲು ದಿ ಗ್ರೇಟ್ ದರ್ಬಾರ್ ಬೀದಿ ವರ್ಕ್ಸ್, ಬಂದರ್‌ನಿಂದ ಮಠದ ಆವರಣಕ್ಕೆ ತಂದು ಭವ್ಯವಾದ ಮೆರವಣಿಗೆಯೊಂದಿಗೆ ಈ ಉತ್ಸಾಹವು ಮುಕ್ತಾಯಗೊಳ್ಳುವುದು. ಭವ್ಯವಾದ ಮೆರವಣಿಗೆಯನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಜನಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಮೆರವಣಿಗೆ ಕೊನೆಗೊಂಡ ಮೇಲೆ ಬೆಳಗಿನ ಹೊತ್ತಿನಲ್ಲಿ ಮಹಾಮಾಯ ದೇವಸ್ಥಾನದ ಸರೋವರದಲ್ಲಿ ವಿಗ್ರಹವನ್ನು ನಿಮಜ್ಜನಗೊಳಿಸಲಾಗುತ್ತದೆ.

Share This Article