ಬೆಂಗಳೂರು: ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯದಲ್ಲಿ ಸ್ಲಂ ನಲ್ಲಿ ವಾಸ್ತವ್ಯ ಹೂಡುವ ಮೂಲಕ ಬಿಜೆಪಿ ನಾಯಕರು ಮತ ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಇದೇ ನಾಯಕರು ಕೊಳಗೇರಿಗಳಲ್ಲಿನ ಹೈಟೆಕ್ ಸೌಲಭ್ಯ ಹೊಂದಿರುವ ಮನೆಗಳಲ್ಲಿ ವಾಸ್ತವ್ಯ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಬಿಎಸ್ ಯಡಿಯೂರಪ್ಪ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕ್ಷೇತ್ರವಾಗಿರುವ ಗಾಂಧಿನಗರದ ಲಕ್ಷ್ಮಣ ಪುರಿ ಸ್ಲಂನಲ್ಲಿರುವ ಮುನಿರತ್ನ, ದೀಪಾ ದಂಪತಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಬಿಎಸ್‍ವೈಗೆ ಸ್ಲಂ ನಿವಾಸಿಗಳು ಆರತಿ ಎತ್ತಿ, ಪೂರ್ಣಕುಂಭ ಸ್ವಾಗತ ಕೋರಿದ್ದರು.
Advertisement
ಯಡಿಯೂರಪ್ಪ ತಂಗಿದ್ದ ಮನೆಯಲ್ಲಿ ಹೈಟೆಕ್ ವೆಸ್ಟರ್ನ್ ಟಾಯ್ಲೆಟ್ ಸಿದ್ಧಪಡಿಸಲಾಗಿತ್ತು. ಹೊಸ ಮಂಚ, ಹೊಸ ಬೆಡ್ ಕೂಡಾ ತಂದು ಹಾಕಲಾಗಿತ್ತು. ಬಿಎಸ್‍ವೈ ವಾಸ್ತವ್ಯ ಮಾಡಿದ ಮನೆಯಲ್ಲಿ ಈ ಹಿಂದೆ ವೆಸ್ಟರ್ನ್ ಟಾಯ್ಲೆಟ್ ಇರಲಿಲ್ಲ. ಎರಡು ದಿನಗಳ ಹಿಂದೆ ನೂತನವಾಗಿ ಈ ಟಾಯ್ಲೆಟ್ ರೆಡಿ ಮಾಡಿರುವ ವಿಚಾರ ತಿಳಿದು ಬಂದಿದೆ.
Advertisement
Advertisement
ಜಗದೀಶ್ ಶೆಟ್ಟರ್: ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವೆಂಕಟೇಶ್ ಗುತ್ತಿ ಎಂಬವರ 2 ಅಂತಸ್ತಿನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಮಾಲೀಕರ ಮನೆಯಲ್ಲಿ ಕಂಪ್ಯೂಟರ್, ಫ್ರಿಡ್ಜ್, ಹೋಂ ಥಿಯೇಟರ್ ಸೇರಿದಂತೆ ಸಕಲ ಆಧುನಿಕ ಸೌಲಭ್ಯಗಳು ಲಭ್ಯವಿದೆ.
Advertisement
ಇಂದು ಮುಂಜಾನೆ ವಾಯು ವಿಹಾರ ಮಾಡಿ ಉಪಹಾರ ಸೇವಿಸಿ ನಂತರ `ಸ್ಲಂ ದುರ್ಭಾಗ್ಯ’ ಎನ್ನುವ ಪುಸ್ತಕ ಬಿಡುಗಡೆ ಮಾಡಿ ಸರ್ಕಾರ ವಿರುದ್ಧ ಶೆಟ್ಟರ್ ವಾಗ್ದಾಳಿ ನಡೆಸಿದರು. ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು. ಇಲ್ಲಿನ ಜನರಿಗೆ ನಮ್ಮ ಸರ್ಕಾರ ಮೂಲಭೂತ ಸೌಕರ್ಯ ನೀಡಿದೆ. ರಾಹುಲ್ ಗಾಂಧಿ ಸೆಕ್ಯೂಲರ್ ಹೆಸರಿನಲ್ಲಿ ಮಠ ಮಂದಿರಗಳನ್ನ ಮರೆತಿದ್ದು, ಸದ್ಯ ಅವರಿಗೆ ಮಠ, ಮಂದಿರಗಳ ನೆನಪಾಗಿದೆ ಎಂದು ಆರೋಪಿದರು.
ಚುನಾವಣೆ ವೇಳೆ ರಾಹುಲ್ ಅವರಿಗೆ ಹಿಂದೂಗಳ ಮತ ಬೇಕಾಗಿದೆ. ಸೆಕ್ಯೂಲರ್ ಎನ್ನುವ ನಾಟಕ ಮಾಡಬೇಡಿ. ಎಲ್ಲರನ್ನು ಒಂದೇ ರೀತಿ ಸಮನಾಗಿ ನೋಡಿ. ಮಹದಾಯಿ ಬಗ್ಗೆ ಕಾಂಗ್ರೆಸ್ ನಿಲವು ಏನು. ಅವರು ಬೆಂಬಲ ಕೊಡುತ್ತಿವಿ ಎಂದು ಹೇಳಬೇಕಿತ್ತು. ಆದರೆ ಅವರು ಶನಿವಾರ ಈ ಬಗ್ಗೆ ಒಂದು ಮಾತು ಹೇಳಿಲ್ಲ. ಇದರಿಂದಲೇ ಕಾಂಗ್ರೆಸ್ ನಾಯಕರ ನಾಟಕ ತಿಳಿಯುತ್ತದೆ ಎಂದರು. ಈ ವೇಳೆ ಬಿಜೆಪಿ ಹಲವು ಮುಖಂಡರು ಶೆಟ್ಟರ್ ಅವರಿಗೆ ಸಾಥ್ ನೀಡಿದರು.
ಸ್ಲಂ ವಾಸ್ತವ್ಯದ ಕುರಿತು ಪಬ್ಲಿಕ್ ಟಿವಿ ಮನೆ ಮಾಲೀಕ ವೆಂಕಟೇಶ್ ಗುತ್ತಿ ಪತ್ನಿ ಪ್ರತಿಕ್ರಿಯಿಸಿ, ನಮ್ಮ ಮನೆ ಸ್ಲಂ ನಲ್ಲಿ ಇದೆ ಎಂಬ ಭಾವನೆ ನಮಗೇ ಇಲ್ಲ. ನಮ್ಮ ಏರಿಯಾದಲ್ಲಿ ಎಲ್ಲಾ ಸೌಲಭ್ಯಗಳು ಇದೆ. ಹೀಗಾಗಿ ನಮ್ ಏರಿಯಾನ ನಾವು ಸ್ಲಂ ಅಂತ ಹೇಳಲ್ಲ ಎಂದು ಹೇಳಿದ್ದಾರೆ.
ಗೋವಿಂದ ಕಾರಜೋಳ: ವಿಜಯಪುರದ ಮಠಪತಿಯ ಸ್ಲಂ ನಲ್ಲಿಯ ಕಲ್ಲಪ್ಪ ಜಮಖಂಡಿ ಮನೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ವಾಸ್ತವ್ಯ ಮಾಡಿದ್ದರು. ಮಾರ್ಬಲ್ ನೊಂದಿಗೆ ವಾಸ್ತವ್ಯಕ್ಕೆ ಬೇಕಾದ ಎಲ್ಲಾ ಸೌಕರ್ಯಗಳಿರುವ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದರು.
ಕಲ್ಲಪ್ಪ ಜಮಖಂಡಿ ಅವರು ಹೋಲ್ ಸೇಲ್ ಪಾದರಕ್ಷೆ ವ್ಯಾಪಾರಿಯಾಗಿದ್ದು, ಆರ್ಥಿಕವಾಗಿ ಸದೃಢವಾಗಿದ್ದಾರೆ. ಸ್ಲಂ ನಲ್ಲಿ ಅನೇಕ ಬಡ ಜನರ ಮನೆಗಳಿದ್ದರೂ ಕಾರಜೋಳ ಅವರು ಮೂರು ಅಂತಸ್ತಿನ ಸುಸಜ್ಜಿತ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲದೇ ತಂಗಿದ್ದ ಮನೆಯಲ್ಲಿ ಬೆಳಗಿನ ನಿತ್ಯ ಕರ್ಮಗಳನ್ನು ಮಾಡುವುದನ್ನು ಬಿಟ್ಟು ಕಾರಜೋಳ ತಮ್ಮ ವಿಜಯಪುರದ ನಿವಾಸಕ್ಕೆ ತೆರಳಿ ಮತ್ತೆ ಕಲ್ಲಪ್ಪ ಅವರ ಮನೆಯಲ್ಲಿ ಊಟ ಸೇವಿಸಿ ಕ್ಯಾಮರಾಗಳಿಗೆ ಪೋಸ್ ಕೊಟ್ಟು ವಾಸ್ತವ್ಯ ಮುಗಿಸಿದ್ದಾರೆ.